HomeLatest Newsರಾಜ್ಯದ ಜನರ ಜೇಬಿಗೆ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ.: ಸಿಎಂ ಸಿದ್ಧರಾಮಯ್ಯ

ರಾಜ್ಯದ ಜನರ ಜೇಬಿಗೆ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ.: ಸಿಎಂ ಸಿದ್ಧರಾಮಯ್ಯ

ಕೂಡ್ಲಿಗಿ: 1,70,000 ಜನರಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾದ ಶಾಸಕ ಶ್ರೀನಿವಾಸ್ ಅವರನ್ನು ಪಡೆದ ಕೂಡ್ಲಿಗಿ ಜನತೆ ಅತ್ಯಂತ ಅದೃಷ್ಟವಂತರು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ₹870 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ, ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಬಳಿಕ ಅವರು ಮಾತನಾಡಿದರು.

ಬರಡು ನೆಲ ಕೂಡ್ಲಿಗಿಯನ್ನು ಹಸಿರಿನ ನೆಲವನ್ನಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿರುವ ಶಾಸಕ ಶ್ರೀನಿವಾಸ್ ಅವರು ಅತ್ಯಂತ ಕ್ರಿಯಾಶೀಲರು. ಇವರಿಂದ ಕ್ಷೇತ್ರದ ಅಭಿವೃದ್ಧಿ ಅತ್ಯಂತ ವೇಗ ಪಡೆದುಕೊಂಡಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮದು ಅಭಿವೃದ್ಧಿ ಪರವಾದ ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಳೆದ ಎರಡು ವರ್ಷಗಳಲ್ಲಿ ಕೂಡ್ಲಿಗಿ‌ ಕ್ಷೇತ್ರಕ್ಕೆ ₹1,750 ಕೋಟಿಗೂ ಅಧಿಕ ಮೊತ್ತದ ಹಣದಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜೊತೆಗೆ ಚುನಾವಣೆ ವೇಳೆ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ, ಐದಕ್ಕೆ ಐದನ್ನೂ ಜಾರಿ ಮಾಡಿದ್ದೇವೆ. ರಾಜ್ಯದ ಜನರ ಮನೆ ಬಾಗಿಲಿಗೆ ಪ್ರತೀ ತಿಂಗಳು ಸರ್ಕಾರದ ಗ್ಯಾರಂಟಿಗಳು ತಲುಪುತ್ತಿವೆ‌. 1.20 ಕೋಟಿ ಕುಟುಂಬಗಳ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಮತ್ತು ಗೃಹಜ್ಯೋತಿಯ ಸವಲತ್ತು ತಲುಪುತ್ತಿದೆ ಎಂದರು.

ಎರಡು ವರ್ಷದಲ್ಲಿ ನಮ್ಮ ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಜೇಬಿಗೆ ಹಾಕಿದೆ. ನಾವು ನುಡಿದಂತೆ ನಡೆದು ಜನರ ಜೇಬಿಗೆ ಹಣ ಹಂಚುತ್ತಿದ್ದರೆ, ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿಯವರು ಮಾನ ಮರ್ಯಾದೆ ಬಿಟ್ಟು ರಾಜ್ಯದ ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ. ಸುಳ್ಳಿನ ಸರದಾರ ಬಿಜೆಪಿಯವರು ಈಗ ಸಾರ್ವಜನಿಕವಾಗಿ ಹರಾಜಾಗಿದ್ದಾರೆ. ಇವರು ಲಜ್ಜೆಗೆಟ್ಟು ಮತಗಳ್ಳತನಕ್ಕೆ ಇಳಿದು ಸಿಕ್ಕಿ ಬಿದ್ದಿದ್ದಾರೆ ಎಂದರು.

FRP ಮತ್ತು MSP ಎರಡನ್ನೂ ನಿಗದಿ ಮಾಡೋದು ಕೇಂದ್ರದ ಬಿಜೆಪಿ ಸರ್ಕಾರ. ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ಡ್ರಾಮಾ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದರೂ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ನಮ್ಮ ಕಬ್ಬು ಬೆಳೆಗಾರರನ್ನು ಕಾಪಾಡೊ ಕೆಲಸ ಮಾಡಿದೆ ಎಂದರು.

ಶಾಸಕ ಶ್ರೀನಿವಾಸ್, ಸಂಸದ ತುಕಾರಾಂ ಇಬ್ಬರೂ ಜನರ ಅಭಿವೃದ್ಧಿ ಹೊರತಾಗಿ ಬೇರೇನನ್ನೂ ಕೇಳುವವರಲ್ಲ. ಇವರಿಬ್ಬರನ್ನು ಗೆಲ್ಲಿಸಿದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಶಾಸಕರು ಮತ್ತು ಸಂಸದರು ನಿಮ್ಮ ಆಸ್ತಿ ಇದ್ದ ಹಾಗೆ. ಇವರನ್ನು ಕಾಪಾಡಿಕೊಳ್ಳಿ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular