ಬೆಂಗಳೂರು: ಕಳೆದ 6 ತಿಂಗಳಿಂದ ಪಡಿತರ ವಿತರಕರಿಗೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಕಮಿಷನ್ ಬಾರದ ಕಾರಣ ಸಗಟು ಮಳಿಗೆಗಳಿಂದ ನವೆಂಬರ್ ತಿಂಗಳ ಪಡಿತರ ಸ್ವೀಕರಿಸದೇ ರಾಜ್ಯಾದ್ಯಂತ ಪಡಿತರ ವಿತರಿಸದಿರಲು ಪಡಿತರ ವಿತರಕರ ಸಂಘ ನಿರ್ಧಾರ ಕೈಗೊಂಡಿದೆ.
ರಾಜ್ಯ ಸರ್ಕಾರದ ನಡೆಯ ವಿರುದ್ಧ ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯ ಸಮಿತಿ ನಿರ್ದೇಶಕ ಆರ್. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಪಡಿತರ ವಿತರಣೆಗೆ ಕಮಿಷನ್ ನೀಡದಿರುವುದರಿಂದ ತುಂಬಾ ತೊಂದರೆಯಾಗಿದೆ. ಈ ಸಮಸ್ಯೆ ಕುರಿತಾಗಿ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನವೆಂಬರ್ ತಿಂಗಳ ಪಡಿತರ ವಿತರಣೆ ಮಾಡದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಎನ್‌ಎಫ್‌ಎಸ್ ಅಕ್ಕಿಗೆ ಸಂಬಂಧಿಸಿದಂತೆ ಎರಡು ತಿಂಗಳ ಕಮಿಷನ್ ಬಂದಿದೆ. ರಾಗಿ ಮತ್ತು ಜೋಳಕ್ಕೆ ಇನ್ನು ಕಮಿಷನ್ ಬಂದಿಲ್ಲ. ಆರು ತಿಂಗಳಿಂದ ಕಮಿಷನ್ ಸಿಗದ ಕಾರಣ ಪಡಿತರ ವಿತರಣೆ ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
