ಬೆಂಗಳೂರು: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಚಾಲಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಂಗಮ್ಮ ಲೇಔಟ್ ನಿವಾಸಿ ರವಿಚಂದ್ರ ಬಂಧಿತ ಆರೋಪಿ. ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತನ್ನ ಪ್ರಿಯತಮೆ ಅಂಜಲಿ(21) ಅವರನ್ನು ಚಾಕುವಿನಿಂದ ತಿವಿದು, ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಮನೆಯಿಂದ ಹೊರಬಂದು ರಸ್ತೆಯಲ್ಲಿ ಅವಸರವಾಗಿ ನಡೆದುಕೊಂಡು ಹೋಗುವಾಗ ಆತನ ಬಟ್ಟೆಯ ಮೇಲಿದ್ದ ರಕ್ತದ ಕಲೆಯನ್ನು ಕಂಡು ಸಂಶಯಗೊಂಡ ಗಸ್ತು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರವಿಚಂದ್ರ, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಂಜಲಿ ಕೆಲವು ತಿಂಗಳಿಂದ ಲಿವಿಂಗ್ ಟುಗೆದರ್ ನಲ್ಲಿದ್ದರು. ಕೌಟುಂಬಿಕ ಕಲಹದ ಕಾರಣ ಮೊದಲ ವತಿಯಿಂದ ಅಂಜಲಿ ದೂರವಾಗಿದ್ದಳು. ಪತ್ನಿ, ಮೂವರು ಮಕ್ಕಳನ್ನು ಊರಿನಲ್ಲೇ ಬಿಟ್ಟಿದ್ದ ರವಿಚಂದ್ರ ಬೆಂಗಳೂರಿನಲ್ಲಿದ್ದ.
ಅಮೃತಹಳ್ಳಿ ಸಮೀಪ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಜೊತೆಗೆ ಆತನಿಗೆ ಗೆಳೆತನವಾಗಿದ್ದು ಲಿವಿಂಗ್ ಟುಗೆದರ್ ನಲ್ಲಿ ನೆಲೆಸಿದ್ದರು. ಖಾಸಗಿ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿದ್ದ ರವಿಚಂದ್ರ ಕೆಲವು ಬಾರಿ ಐದಾರು ದಿನ ಹೊರ ರಾಜ್ಯಗಳಿಗೆ ಹೋಗುತ್ತಿದ್ದ. ಆತನಿಗೆ ಪ್ರಿಯತಮೆ ಅಂಜಲಿ ಮೇಲೆ ಸಂಶಯ ಮೂಡಿತ್ತು. ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ್ದ ಆತ ಗುರುವಾರ ರಾತ್ರಿ ಮನೆಗೆ ಮರಳಿದ್ದಾನೆ. ಆಗ ಅಂಜಲಿ ಮನೆಯಲ್ಲಿ ಇರಲಿಲ್ಲ. ಸಮೀಪದ ಬಾರ್ ಗೆ ತೆರಳಿ ಮದ್ಯ ಸೇವಿಸಿ ಮನೆಗೆ ಮರಳಿ ಬಂದಿದ್ದಾನೆ. ಈ ವೇಳೆ ಅಂಜಲಿ ನಿದ್ದೆ ಮಾಡುತ್ತಿದ್ದಳು. ಆಕೆಯೊಂದಿಗೆ ಜಗಳವಾಡಿದ್ದ ರವಿಚಂದ್ರ ಯಾರ ಜೊತೆಗೆ ಹೊರಗೆ ಹೋಗಿದ್ದೆ ಎಂದು ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಮುಖಕ್ಕೆ ಐದಾರು ಬಾರಿ ಗುದ್ದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ. ಕೊಲೆ ನಂತರ ಮನೆಯಿಂದ ಹೊರಗೆ ಬಂದು ಅವಸರದಲ್ಲಿ ಹೋಗುತ್ತಿದ್ದ ಆತನ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ಗಮನಿಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಗೊತ್ತಾಗಿದೆ.
