ಬೆಳಗಾವಿ: ಒಂದು ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಹಾಗೂ ಹಿತ್ತರಗಿ ಗ್ರಾಮಗಳಲ್ಲಿ ಕ್ಷಣ ಕ್ಷಣಕ್ಕೂ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿ ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ವಿವಿಧೆಡೆಯಿಂದ ಆಗಮಿಸುತ್ತಿರುವ ರೈತರು ಹೋರಾಟಗಾರರರಿಗಾಗಿ ಒಂದೆಡೆ ಗ್ರಾಮದ ರೈತರು ರಸ್ತೆಯಲ್ಲಿಯೇ ಊಟ ತಯಾರಿಸಿ ವಿತರಿಸಿದ್ದಾರೆ.
ಗ್ರಾಮಸ್ಥರಿಂದ 3 ಲಕ್ಷ ರೈತರಿಗಾಗಿ ಅನ್ನ-ಸಾಂಬಾರ್ ರೊಟ್ಟಿ-ಪಲ್ಯ ತಯಾರಿಸಲಾಗಿದ್ದು, ಪ್ರತಿಭಟನಾ ನಿರತ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಳೆದ 9 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿಯೇ ರೈತರೇ ಊಟ ತಯಾರಿಸಿ ಹೋರಾಟ ಮುಂದುವರೆಸಿದ್ದಾರೆ.
