ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪರ ಪ್ರಚಾರ ನಡೆಸಿದ ಆರೋಪದಡಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನವ್ ಅವರಿಗೆ ಸೇರಿದ ಒಟ್ಟು 11.14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿದೆ.
1 ಎಕ್ಸ್ ಬೆಟ್ ಎಂಬ ಆನ್ಲೈನ್ ಬೆಟ್ಟಿಂಗ್ ಕಂಪನಿಯ ಕುರಿತು ಖಚಿತ ಮಾಹಿತಿ ಹೊಂದಿದ್ದರೂ ಈ ಇಬ್ಬರು ಈ ಕಂಪನಿಯ ನಂಟು ಹೊಂದಿರುವ ವಿದೇಶಿ ಸಂಸ್ಥೆಗಳ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಕ್ರಮ ಹಣದ ಮೂಲವನ್ನು ಮುಚ್ಚಿಡಲು ಈ ಕ್ರಿಕೆಟಿಗರಿಗೆ ವಿದೇಶಿ ಸಂಸ್ಥೆ ಹೆಸರಲ್ಲಿ ಹಣ ಪಾವತಿಸಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಹೀಗಾಗಿ ಸ್ವೀಕರಿಸಿದ ಹಣ ಅಪರಾಧವೆಂದು ಪರಿಗಣಿಸಿದ ಜಾರಿ ನಿರ್ದೇಶನಾಲಯ ಶಿಖರ್ ಧವನ್ ಅವರ 4.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ, ಸುರೇಶ್ ರೈನಾ ಅವರ 6.64 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಬೆಟ್ಟಿಂಗ್ ಕಂಪನಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವಂಚನೆ ಎಸಗಿದೆ ಎನ್ನುವ ಆರೋಪದಡಿ ಈಗಾಗಲೇ ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್ ಸೇರಿದಂತೆ ಹಲವರ ವಿಚಾರಣೆ ನಡೆಸಲಾಗಿದೆ.
