ಹುಬ್ಬಳ್ಳಿ: ಹೆತ್ತ ತಾಯಿಯನ್ನೇ ಕೊಲೆ ಮಾಡಿ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ನಿವೃತ್ತ ಸರ್ಕಾರಿ ನೌಕರನನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ -ಧಾರವಾಡ ಪಾಲಿಕೆಯ ನಿವೃತ್ತ ನೌಕರ ಅಶೋಕ್ ಕೊಲೆ ಆರೋಪಿ. ತಾಯಿ ನಿಂಗವ್ವ ಮುಳಗುಂದ(78) ಕೊಲೆಯಾದವರು. ಬ್ರಹ್ಮಗಿರಿ ಕಾಲೋನಿಯಲ್ಲಿ ನಿಂಗವ್ವ ಮುಳಗುಂದ ವಾಸವಾಗಿದ್ದು, ನವೆಂಬರ್ 4ರಂದು ಮನೆಯಲ್ಲಿ ಮಲಗಿದ್ದರು. ಅವರ ಪತಿ ಮಲ್ಲಪ್ಪ ಮನೆಯ ಹೊರಗೆ ಮಲಗಿದ್ದರು. ರಾತ್ರಿ ವೇಳೆ ಹಿಂಬಾಗಿಲ ಮೂಲಕ ಮನೆಯೊಳಗೆ ಬಂದಿದ್ದ ಆರೋಪಿ ಅಶೋಕ್ ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಮರುದಿನ ವಿದ್ಯಾನಗರ ಠಾಣೆ ಪೋಲೀಸರಿಗೆ ಯಾರೋ ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವ ಬಗ್ಗೆ ಶಂಕಿಸಿ ತನಿಖೆ ಕೈಗೊಂಡಿದ್ದರು. ಹೆಚ್ಚಿನ ತನಿಖೆ ನಡೆಸಿದಾಗ ಪುತ್ರನೇ ಕೊಲೆ ಆರೋಪಿ ಎನ್ನುವುದು ಗೊತ್ತಾಗಿದೆ.
ನಾಲ್ವರು ಹೆಣ್ಣು ಮಕ್ಕಳು, ಓರ್ವ ಪುತ್ರನನ್ನು ಹೊಂದಿದ್ದ ನಿಂಗವ್ವ ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಹೆಣ್ಣು ಮಕ್ಕಳಿಗೆ ಹಂಚಿದ್ದರು. ಅಶೋಕ್ ಬೇರೆ ಮನೆ ಕಟ್ಟಿಕೊಂಡು ವಾಸವಾಗಿದ್ದ. ಆದರೆ, ಹೆತ್ತವರ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ನಿವೇಶನವೊಂದನ್ನು ಹೆಣ್ಣು ಮಕ್ಕಳಿಗೆ ಕೊಡುವ ಬಗ್ಗೆ ನಿಂಗವ್ವ ಚರ್ಚೆ ನಡೆಸಿದ್ದರು. ಇದರಿಂದಾಗಿ ಆಕ್ರೋಶಗೊಂಡಿದ್ದ ಅಶೋಕ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದ. ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿಕೊಂಡು ಹೋಗಿದ್ದ. ಅಂದು ರಾತ್ರಿ ಮನೆಗೆ ಬಂದು ಕಟ್ಟಿಗೆ ಮಣೆಯಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
