ರಾಜ್ಯದ ಕಬ್ಬು ಬೆಳೆಗಾರರು ಏಳನೇ ದಿನವೂ ಹೋರಾಟದಲ್ಲಿ ನಿಂತಿದ್ದಾರೆ. ಅವರ ಬೇಡಿಕೆ ನ್ಯಾಯಸಮ್ಮತವಾಗಿದೆ. ಪ್ರತಿ ಟನ್ ಕಬ್ಬಿಗೆ 3500 ರೂ. ದರ ಸಿಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆಗಳು 3300 ರೂ. ಮತ್ತು ರಾಜ್ಯ ಸರ್ಕಾರ 200 ರೂ. ನೀಡಿದರೆ, ರೈತರಿಗೆ ಬೇಕಾದ ದರ ನೀಡಲು ಸಾಧ್ಯ. ಕಾರ್ಖಾನೆಗಳು ಎಥೆನಾಲ್, ವಿದ್ಯುತ್ ಸೇರಿ ಹಲವಾರು ಉಪ ಉತ್ಪನ್ನಗಳಿಂದ ಸಾಕಷ್ಟು ಆದಾಯ ಪಡೆಯುತ್ತಿವೆ. ಆದ್ದರಿಂದ ರೈತರಿಗೆ ನ್ಯಾಯ ಒದಗಿಸುವುದು ನ್ಯಾಯವಾದದ್ದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಕಾನೂನುಬದ್ಧವಾಗಿ ಕಬ್ಬಿನ ದರ ನಿಗದಿ ಮಾಡುವ ಅಧಿಕಾರ ಇದೆ. ಹಾಗಿದ್ದಾಗ ಇಷ್ಟು ದಿನ ತಡ ಯಾಕೆ? ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಕ್ಷಣ ಮಧ್ಯ ಪ್ರವೇಶ ಮಾಡಿ ಈ ಪ್ರಶ್ನೆಗೆ ಪರಿಹಾರ ನೀಡಬೇಕು. ತಡವಾದಷ್ಟು ರೈತರ ಕಷ್ಟ ಹೆಚ್ಚುವುದೇ ಹೊರತು ಕಡಿಮೆಯಾಗುವುದಿಲ್ಲ. ಮಹಾರಾಷ್ಟ್ರದಲ್ಲಿ ಕಾರ್ಖಾನೆಗಳೊಂದಿಗೆ ವಿದ್ಯುತ್ ಮಾರಾಟದ ಒಪ್ಪಂದದ ಮೂಲಕ ಹೆಚ್ಚಿನ ದರ ಸಿಗುತ್ತಿದ್ದಂತೆ, ನಮ್ಮ ರಾಜ್ಯದಲ್ಲೂ ಪಿಪಿಎ ಪರಿಷ್ಕರಣೆ ಮಾಡಿದರೆ ರೈತರಿಗೆ ಇನ್ನೂ ಉತ್ತಮ ದರ ನೀಡಲು ಸಾಧ್ಯ ಎಂದಿದ್ದಾರೆ.
ರೈತರ ಕಟ್ಟೆ ಒಡೆದರೆ ಅದು ರಾಜ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ವಿಳಂಬ ಬೇಡ. ನಿರ್ಧಾರ ಬೇಕು. ಕ್ರಮ ಬೇಕು. ಬಿಜೆಪಿ ಎಂದಿಗೂ ರೈತರ ಪರ ನಿಂತಿದೆ, ನಿಲ್ಲುತ್ತದೆ. ನಮ್ಮ ಹೋರಾಟ ಮುಂದುವರೆಯುತ್ತದೆ. ರೈತರ ಬೆವರಿನ ಬೆಲೆ ಸಿಗಬೇಕು. ಅದಕ್ಕೆ ಸರ್ಕಾರವೇ ಈಗ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
