ಬೆಳಗಾವಿ: ಕಬ್ಬು ಬೆಳೆಗಾರರು ಮತ್ತು ಸಚಿವ ಹೆಚ್.ಕೆ. ಪಾಟೀಲ್ ನಡುವಿನ ಸಂಧಾನ ವಿಫಲವಾಗಿದೆ. ಸಿಎಂ ಬಳಿಗೆ ನಿಯೋಗ ಬನ್ನಿ ಎಂದು ಸಚಿವರು ಹೇಳಿದಾಗ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಸೇರಿದಂತೆ ನೀವೆಲ್ಲಾ ಸಚಿವರು ತೀರ್ಮಾನ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ಕಬ್ಬಿಗೆ 3500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಗುರ್ಲಾಪುರ ಕ್ರಾಸ್ ನಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾ ಸ್ಥಳದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರು ಸಚಿವರ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3500 ರೂ. ಬೆಲೆ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಕಬ್ಬಿನಿಂದ ಸ್ಪಿರಿಟ್, ಎಥೆನಾಲ್ ತಯಾರು ಮಾಡುತ್ತಿದ್ದಾರೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. ಆ ತೆರಿಗೆ ಹಣದಲ್ಲಿ ರಾಜ್ಯ ಸರ್ಕಾರ ಒಂದು ಸಾವಿರ ರೂಪಾಯಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವುದನ್ನು ಬಂದ್ ಮಾಡಬೇಕು. ಸರ್ಕಾರವೇ ಸಕ್ಕರೆ ಕಾರ್ಖಾನೆಯ ಬಳಿ ತೂಕದ ಯಂತ್ರ ಇಡಬೇಕು. ತೂಕ ಯಂತ್ರ ಸೇರಿ ಪ್ರತಿಯೊಂದು ಮಾಹಿತಿ ಡಿಜಿಟಲೀಕರಣ ಮಾಡಬೇಕು. ಸಕ್ಕರೆ ಆಯುಕ್ತರ ಕಚೇರಿಗೆ ನೂರು ಸಿಬ್ಬಂದಿ ನೇಮಕ ಮಾಡಬೇಕು. ಸಕ್ಕರೆ ಆಯುಕ್ತರಾಗಿ ರವಿಕುಮಾರ್ ಅವರನ್ನು ಮರುನೇಮಕ ಮಾಡಬೇಕು. ಸಕ್ಕರೆ ಇಲಾಖೆಯನ್ನು ಸದೃಢಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಕ್ಕರೆ ಇಲಾಖೆಯನ್ನು ಗಟ್ಟಿಗೊಳಿಸಲು ಆಗದಿದ್ದರೆ ತೆಗೆದುಬಿಡಿ. ಅದನ್ನು ರೈತರೇ ನೋಡಿಕೊಳ್ಳುತ್ತಾರೆ. ಸಕ್ಕರೆ ಕಾರ್ಖಾನೆಯವರು ಯಾರೂ ಕೂಡ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಾರ್ಖಾನೆಯ ಮೇಲೆ ಮತ್ತೊಂದು ಕಾರ್ಖಾನೆಗಳನ್ನು ಕಟ್ಟುತ್ತಿದ್ದಾರೆ ಎಂದು ಕಾರ್ಖಾನೆಗಳ ಮಾಲೀಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸಮ್ಮುಖದಲ್ಲಿ ರೈತರ ಜೊತೆ ಸರ್ಕಾರ ಸಂಧಾನಕ್ಕೆ ಮುಂದಾಗಿದೆ. ರೈತರ ಮನವೊಲಿಸಲು ಹೆಚ್.ಕೆ. ಪಾಟೀಲ್ ಹರಸಾಹಸ ನಡೆಸಿದ್ದಾರೆ. ರೈತರ ಜೊತೆಗೆ ಸಭೆ ನಡೆಸುತ್ತೇವೆ. ನಾಳೆ ಸಂಜೆ ಸಭೆಗೆ ಬರುವಂತೆ ರೈತರಿಗೆ ಆಹ್ವಾನ ನೀಡಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಇದುವರೆಗೂ ಕಬ್ಬು ಬೆಳೆಗಾರರು ಒಪ್ಪಿಕೊಂಡಿಲ್ಲ. ರೈತರು ಸಿಎಂ ಬಳಿ ಬರುವುದಿಲ್ಲ. ಸಿಎಂ ಸೇರಿ ಎಲ್ಲಾ ಸಚಿವರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದಿದ್ದಾರೆ. ಇದರಿಂದಾಗಿ ಸಂಧಾನ ವಿಫಲವಾಗಿದೆ. ಸಚಿವ ಹೆಚ್.ಕೆ. ಪಾಟೀಲ್ ಸ್ಥಳದಿಂದ ತೆರಳಿದ್ದು, ರೈತರ ಪ್ರತಿಭಟನೆ ಮುಂದುವರೆದಿದೆ. ನಾಳೆಯಿಂದ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

