ಬೆಂಗಳೂರು: ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೋ ಅಷ್ಟೂ ದಿನ ಅವರೇ ಸಿಎಂ. ಮುಂದೆಯೂ ಅವರೇ ಇರಬಹುದು. ಅವರು ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಪಕ್ಷ ಸಂಘಟಿಸಿ, ಪಕ್ಷ ಕಟ್ಟುತ್ತಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ, ಇದೆಲ್ಲವೂ ಊಹಾಪೋಹ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳು ಪಕ್ಷದ ಮುಂದೆ ಇಲ್ಲ. ಸಿದ್ದರಾಮಯ್ಯ ಅವರಿಗೆ ಇನ್ನು ವಯಸ್ಸಾಗಿಲ್ಲ. ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ ಎಂದರು.
ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ, ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ಗುರುವಾರ (ಡಿ.6) ವಿಚಾರಣೆ ನಡೆಯಲಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ವಿಶೇಷ ಪೀಠ ರಚಿಸಿರುವಂತೆ ಕಾಣಿಸುತ್ತದೆ. ಈ ವಿಚಾರಣೆ ವೇಳೆ ನಮ್ಮ ನಿಲುವು ಏನಿರಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ವಕೀಲರ ಜೊತೆ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ ಎಂದರು.
ಬಿಹಾರ ಚುನಾವಣೆಗೂ ಇದಕ್ಕೂ ಸಂಬಂಧ ವಿಲ್ಲ. ಶಿವಕುಮಾರ್ ಅವರು ಈ ಹಿಂದಿನಿಂದಲೂ ದೆಹಲಿಗೆ ಹೋದಾಗೆಲ್ಲಾ ಕಾಂಗ್ರೆಸ್ ಕಚೇರಿಗೆ ಹೋಗುತ್ತಾರೆ, ವರಿಷ್ಠರು ಸಿಕ್ಕರೆ ಮಾತನಾಡುತ್ತಾರೆ, ಬರುತ್ತಾರೆ. ತುರ್ತಾಗಿ ಮೇಕೆದಾಟು ಪ್ರಕರಣ ವಿಚಾರಣೆಗೆ ಬಂದಿದೆ. ವಿಶೇಷ ಪೀಠ ರಚನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಈ ಪೀಠ ರಚನೆಯಿಂದ ಯಾವ ರೀತಿ ಲಾಭ ಆಗಲಿದೆ, ನಮ್ಮ ನಿಲುವು ಹೇಗಿರಬೇಕು ಎಂದು ಚರ್ಚೆ ಮಾಡಲು ತೆರಳಿದ್ದಾರೆ. ನಾಳೆ ಹೆಚ್ಚು ಕಮ್ಮಿ ಆದರೆ ಯಾಕೆ ಸರಿಯಾಗಿ ನಿಭಾಯಿಸಲಿಲ್ಲ ಎಂದು ನೀವುಗಳೇ ಪ್ರಶ್ನೆ ಮಾಡುತ್ತೀರಿ. ಇದು ರಾಜಕೀಯ ಕೆಲಸ ಅಲ್ಲ. ಕರ್ನಾಟಕ ರಾಜ್ಯದ ಹಿತ ಕಾಪಾಡುವ ಕೆಲಸ ಎಂದರು.
