ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಹಾಗೂ ಬಾಕಿ ಹಣ ಪಾವತಿಗೆ ಒತ್ತಾಯಿಸಿ ಕಬ್ಬು ಬೆಳಗಾರರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಿವಯೋಗಿ ವೃತ್ತದಲ್ಲಿ ಜತ್ತ ಜಾಂಬೋಟಿ-ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದು, ರೈತರಿಗೆ ಸಾಥ್ ನೀಡಿದರು. ಮತ್ತೊಖ್ಂದೆಡೆ ಬಾಗಲಕೋಟೆ-ನಿಪ್ಪಾಣಿ ಹೆದ್ದಾರಿ ತಡೆ ನಡೆಸಿರುವ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1 ಟನ್ ಕಬ್ಬಿಗೆ 3500 ರೂಪಾಯಿ ದರ ನಿಗದಿ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡ್ದ ಬಿ.ವೈ.ವಿಜಯೇಂದ್ರ, ಕಬ್ಬು ಬೆಳೆಗಾರರು, ರೈತರು ಸಂಕಷ್ಟದಲ್ಲಿದ್ದಾರೆ. ಭಾರಿ ಮಳೆ, ಪ್ರವಾಹ ಸ್ಥಿತಿಯಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರು ಯಾರೋಬ್ಬರೂ ಉತ್ತರ ಕರ್ನಾಟಕ ಪ್ರವಾಸ ಮಾಡಿಲ್ಲ. ರೈತರು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಕಿಂಚಿತ್ತೂ ತಲೆಕೆಡೆಸಿಕೊಳ್ಳುತ್ತಿಲ್ಲ. ಸಂಜೆಯವರೆಗೂ ಸಮಯ ನೀಡುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
