ಗುನಾ: ಮಧ್ಯಪ್ರದೇಶದ ಗುನಾದಲ್ಲಿ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಟೈರ್ ಪಂಕ್ಚರ್ ಆಗಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ರೋಗಿ ಸಾವನ್ನಪ್ಪಿದ್ದಾರೆ.
65 ವರ್ಷದ ಜಗದೀಶ್ ಓಜಾ ಮೃತಪಟ್ಟವರು. ಅವರನ್ನು ಎದೆ ನೋವು ಮತ್ತು ಅಧಿಕ ರಕ್ತದೊತ್ತಡದ ದೂರುಗಳ ನಂತರ ಮೈನಾ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಘಟನೆ ಸಂಭವಿಸಿದೆ. ಅವರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಆಂಬ್ಯುಲೆನ್ಸ್ನ ಒಂದು ಟೈರ್ ಪಂಕ್ಚರ್ ಆದ ನಂತರ ರಾಷ್ಟ್ರೀಯ ಹೆದ್ದಾರಿ 46 ರಲ್ಲಿ ಕೆಟ್ಟುಹೋಯಿತು. ಆಂಬ್ಯುಲೆನ್ಸ್ನಲ್ಲಿ ಬಿಡಿಭಾಗದ ಟೈರ್(ಸ್ಟೆಪ್ನಿ) ಇರಲಿಲ್ಲ. ಇದರ ಪರಿಣಾಮವಾಗಿ, ವಾಹನವು ಸುಮಾರು ಒಂದು ಗಂಟೆ ರಸ್ತೆಬದಿಯಲ್ಲಿ ನಿಲ್ಲುವಂತಾಗಿತ್ತು, ಈ ಸಮಯದಲ್ಲಿ ಓಜಾ ಅವರ ಸ್ಥಿತಿ ಹದಗೆಟ್ಟಿತು ಮತ್ತು ಆಸ್ಪತ್ರೆ ತಲುಪುವ ಮೊದಲು ಅವರು ಸಾವನ್ನಪ್ಪಿದ್ದಾರೆ.
ಆಂಬ್ಯುಲೆನ್ಸ್ ಚಾಲಕ ಆ ವಾಹನದಲ್ಲಿ ಮೊದಲ ದಿನ ಕೆಲಸಕ್ಕೆ ಬಂದಿದ್ದು, ಸ್ಟೆಪ್ನಿ ಟೈರ್ ಇಲ್ಲವೆನ್ನುವುದು ಅವರಿಗೆ ತಿಳಿದಿರಲಿಲ್ಲ. ಮೈನಾದಿಂದ ರೋಗಿಯನ್ನು ಕರೆದುಕೊಂಡು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ನನಗೆ ಸೂಚನೆ ಮಾತ್ರ ಬಂದಿತ್ತು ಎಂದು ಚಾಲಕ ಹೇಳಿದ್ದಾನೆ.
ಆಂಬ್ಯುಲೆನ್ಸ್ 45 ನಿಮಿಷ ತಡವಾಗಿ ಬಂದಿತು ಎಂದು ಓಜಾ ಅವರ ಮಗ ಆರೋಪಿಸಿದ್ದಾರೆ. ನನ್ನ ತಂದೆ ಈಗಾಗಲೇ ನೋವಿನಿಂದ ಬಳಲುತ್ತಿದ್ದರು. ಪ್ರಯಾಣದ ಸುಮಾರು 10 ಕಿ.ಮೀ. ದೂರದಲ್ಲಿ, ಆಂಬ್ಯುಲೆನ್ಸ್ ಟೈರ್ ಪಂಕ್ಚರ್ ಆಗಿತ್ತು. ನಾವು ಇನ್ನೊಂದು ವಾಹನವನ್ನು ವ್ಯವಸ್ಥೆ ಮಾಡಿ ಆಸ್ಪತ್ರೆ ತಲುಪುವ ಹೊತ್ತಿಗೆ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅವರು ಹೇಳಿದರು, ಇದು ನಿರ್ಲಕ್ಷ್ಯದ ಸ್ಪಷ್ಟ ಪ್ರಕರಣ ಎಂದು ದೂರಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರಿಷಿ ಅಗರ್ವಾಲ್ ಈ ಸಾವು ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಆಂಬ್ಯುಲೆನ್ಸ್ ಸೇವೆಗಳಲ್ಲಿ 600 ಕೋಟಿ ರೂ.ಗಳಿಗೂ ಹೆಚ್ಚು ದುರುಪಯೋಗವಾಗಿದೆ ಎಂದು ಆರೋಪಿಸಿ, ಆರೋಗ್ಯ ಇಲಾಖೆಯು ಭಾರಿ ಭ್ರಷ್ಟಾಚಾರ ನಡೆಸಿದೆ ಎಂದು ಶಾಸಕರು ಆರೋಪಿಸಿದರು ಮತ್ತು ತನಿಖೆಗೆ ಒತ್ತಾಯಿಸಿದರು.
