ಗಣಿಬಾಧಿತ ತಾಲ್ಲೂಕುಗಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ

ಚಿತ್ರದುರ್ಗ : ಜಿಲ್ಲೆಯ ಗಣಿಭಾದಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 01 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಿಸುವ ಮಹತ್ವಪೂರ್ಣ ಕಾರ್ಯಕ್ರಮವನ್ನು ನವೆಂಬರ್ 03 ರಿಂದ ಚಾಲನೆ ನೀಡಲಾಗುತ್ತಿದ್ದು, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 01 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮದ ಅನುಷ್ಠಾನದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಎಂಇಆರ್‍ಸಿ ಇಲಾಖೆಯ ಸಿಇಪಿಎಂಐಜೆಡ್ ಪ್ರಾಜೆಕ್ಟ್ ಆರ್ಥಿಕ ಅನುದಾನದಡಿ ಜಿಲ್ಲೆಯ ಗಣಿಬಾಧಿತ ತಾಲ್ಲೂಕುಗಳಾದ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 01 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನ್ಯತೆಗಳಿಂದ ಉಂಟಾಗುತ್ತಿರುವ ಅನಾರೋಗ್ಯಕರ ಪರಿಸ್ಥಿತಿ ನಿವಾರಿಸಿ, ಗಣಿಭಾದಿತ ಪ್ರದೇಶಗಳ ಆರೋಗ್ಯ ಮತ್ತು ಬೆಳವಣಿಗೆಯ ಗುಣಮಟ್ಟವನ್ನು ಸುಧಾರಿಸಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಪೂರಕ ಪೌಷ್ಠಿಕ ಆಹಾರ ಒದಗಿಸಲು ಯೋಜಿಸಲಾಗಿದ್ದು, ಸರ್ಕಾರದ ಸುತ್ತೊಲೆ ಅನ್ವಯ ಕಟ್ಟುನಿಟ್ಟಾಗಿ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಶಾಲಾ ಶಿಕ್ಷಣ ಇಲಾಖೆಯ ಯೋಜನೆಗಳ ಜೊತೆಯಲ್ಲಿಯೇ ಹೆಚ್ಚುವರಿಯಾಗಿ ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು. ಯೋಜನೆಯಲ್ಲಿ ಯಾವುದೇ ಲೋಪದೋಷಗಳು, ವ್ಯತ್ಯಾಸಗಳು ಆಗದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಬಹಳ ಮುಖ್ಯವಾಗಿದ್ದು, ಇದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲಿದ್ದಾರೆ. ಹೀಗಾಗಿ ಮಕ್ಕಳು ಚಟುವಟಿಕೆಯಿಂದ ಇರಲು ಸಾಧ್ಯವಾಗಲಿದೆ. ಇದರ ಜೊತೆಗೆ ಕಲಿಕೆಯ ಗುಣಮಟ್ಟವೂ ಉತ್ತಮವಾಗಲಿದೆ ಹಾಗೂ ಪೂರಕ ಪೌಷ್ಠಿಕ ಆಹಾರ ವಿತರಣೆಯ ಆಕರ್ಷಣೆಯಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಸೇರಿದಂತೆ ಬಹಳಷ್ಟು ಬದಲಾಣೆಗಳು ಆಗಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಫಲಿತಾಂಶವು ಹೆಚ್ಚಳವಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪೂರಕ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಅಧ್ಯಕ್ಷರು, ಪೋಷಕ ಪ್ರತಿನಿಧಿಗಳಿಂದ, ತಾಯಂದಿರಿಂದ ರಚಿಸಲಾದ ಖರೀದಿ ಸಮಿತಿಯ ಮೂಲಕವೇ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಯೊಂದಿಗೆ ನಿಗಧಿತ ಘಟಕ ವೆಚ್ಚ ಮೀರದಂತೆ ಅಗತ್ಯ ಪ್ರಮಾಣದಲ್ಲಿ ಖರೀದಿಸಲು ಕ್ರಮವಹಿಸಬೇಕು. ಸ್ಥಳೀಯ ರೈತರಿಂದ ಹಣ್ಣು ಮಾರಾಟ ಮಳಿಗೆಗಳಿಂದ, ಹಣ್ಣು ಬೆಳೆಗಾರರಿಂದ ಹಾಗೂ ತೋಟಗಾರಿಕೆ ಇಲಾಖೆಯ ಮಾರಾಟ ಮಳಿಗೆಯಿಂದ ಉತ್ತಮ ಗುಣಮಟ್ಟದ ಕಾಳುಗಳು, ಸೊಪ್ಪು, ತರಕಾರಿ, ಹಣ್ಣುಗಳನ್ನು ನೇರವಾಗಿ ಖರೀದಿಸಿ, ಶಾಲೆಯಲ್ಲಿ ಬಿಲ್ಲು ವೋಚರ್‍ಗಳನ್ನು ಪ್ರತ್ಯೇಕ ದಾಖಲೆಯಲ್ಲಿ ಧೃಢೀಕರಿಸಿ ನಿರ್ವಹಿಸಬೇಕು. ಆಹಾರ ಪದಾರ್ಥಗಳ ಖರೀದಿಯ ಪ್ರತಿ ಬಿಲ್ಲು ವೋಚರ್‍ಗಳನ್ನು ಮುಖ್ಯ ಶಿಕ್ಷಕರ ಹಾಗೂ ಎಸ್‍ಡಿಎಂಸಿ ಅಧ್ಯಕ್ಷರ ದೃಢೀಕರಣ ಸಹಿ ಮಾಡಿಸಿ, ಖರೀದಿ ಸಮಿತಿಯ ಪರಿಶೀಲನೆಗೆ ಒಳಪಡಿಸಿ, ಶಾಲೆಯಲ್ಲಿ ಮುಖ್ಯ ಶಿಕ್ಷಕರು ದಾಖಲೆಗಳನ್ನು ತಪ್ಪದೇ ನಿರ್ವಹಿಸಬೇಕು. ಪ್ರತಿ ದಿನ ಶಾಲಾ ಅವಧಿಯ ನಂತರ ಸಿಇಪಿಎಂಐಜೆಡ್ ಯೋಜನೆಯಡಿಯಲ್ಲಿ ಪೂರಕ ಪೌಷ್ಠಿಕ ಆಹಾರ ವಿತರಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಮಧ್ಯಾಹ್ನ ಬಿಸಿಯೂಟ ಯೋಜನೆ ನಿರ್ವಹಣೆ ಮಾಡಿದಂತೆಯೇ ಶಾಲಾ ಶಿಕ್ಷಕರು ಮತ್ತು ಎಸ್‍ಡಿಎಂಸಿ ಯವರು ಪೂರಕ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮವನ್ನು ನಿರ್ವಹಣೆ ಮಾಡಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಎಂ ಪೋಷಣ್ ಸಹಾಯಕ ನಿರ್ದೇಶಕರು, ಕ್ಷೇತ್ರ ಸಮನ್ವಾಯಾಧಿಕಾರಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಮುಖ್ಯ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸಮಿತಿಯ ಅಧ್ಯಕ್ಷರು ಒಳಗೊಂಡ ತಾಲ್ಲೂಕು ಹಂತದ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಸೂಚನೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ 334 ಸರ್ಕಾರಿ ಶಾಲೆಗಳು, 01 ರಿಂದ 10ನೇ ತರಗತಿಯ 22,752 ವಿದ್ಯಾರ್ಥಿಗಳು, ಹೊಸದುರ್ಗ 306 ಸರ್ಕಾರಿ ಶಾಲೆಗಳು, 12,417 ವಿದ್ಯಾರ್ಥಿಗಳು, ಹೊಳಲ್ಕೆರೆ 227 ಸರ್ಕಾರಿ ಶಾಲೆಗಳ 10,801 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನ 146 ಸರ್ಕಾರಿ ಶಾಲೆಗಳ 17,333 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪೂರಕ ಪೌಷ್ಠಿಕ ಆಹಾರ ಪಟ್ಟಿ ಅನ್ವಯ ಪ್ರತಿ ದಿನ 50 ಗ್ರಾಂ ನಂತೆ, ಸೋಮವಾರ ಕಡಲೆಕಾಳು ಉಸುಳಿ, ಮಂಗಳವಾರ ಹೆಸರು ಕಾಳು ಉಸುಳಿ, ಬುಧವಾರ ಶೇಂಗಾ ಉಸುಳಿ, ಗುರುವಾರ ಕಡಲೆಕಾಳು ಉಸುಳಿ, ಶುಕ್ರವಾರ ಹೆಸರು ಕಾಳು ಉಸುಳಿ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಳಾದ ಗಿರಿಜಾ, ನಿರ್ಮಲಾ ದೇವಿ, ಶ್ರೀನಿವಾಸ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂಪತ್ ಕುಮಾರ್, ಸುರೇಂದ್ರ ನಾಯ್ಕ್, ಶ್ರೀನಿವಾಸ್, ತಿಪ್ಪೇಸ್ವಾಮಿ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read