ಚಿಕ್ಕಮಗಳೂರು: ನಾಳೆ ಹಸೆಮಣೆಯೇರಬೇಕಿದ್ದ ನವವಧು ಇಂದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ನಡೆದಿದೆ.
ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಮದುವೆ ಸಿದ್ಧತೆಯಲ್ಲಿ ಸಂತಸದಲ್ಲಿದ್ದ ವಧು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಶೃತಿ (32) ಮೃತ ಯುವತಿ. ತರೀಕೆರೆಯ ದಿಲೀಪ್ ಜೊತೆ ನಾಳೆ ಶೃತಿ ವಿವಾಹ ನಿಗದಿಯಾಗಿತ್ತು. ಎರಡೂ ಮನೆಗಳಲ್ಲಿಯೂ ಮದುವೆಯ ಸಂಭ್ರಮ ಮನೆ ಮಾಡಿತ್ತು. ಆದರೆ ಮದುವೆಗೆ ಒಂದು ದಿನ ಮೊದಲು ವಧು ಹೃದಯಾಘಾತದಿಂದ ಮೃತಪಟ್ಟಿದ್ದು, ದುಃಖ ಮಡುಗಟ್ಟಿದೆ.
ನಾಳೆ ತರೀಕೆರೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಾಗಿತ್ತು. ಆದರೆ ಇಂದು ಮನೆಯಲ್ಲಿದ್ದಾಗಲೇ ವಧು ಶೃತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
