ಕೊಪ್ಪಳ: ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾಯಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ಕೊಂದ ತಾಯಿ ವಿರುದ್ಧವೇ ಕೇಸು ದಾಖಲಾಗಿದೆ.
ಕೊಪ್ಪಳ ಜಿಲ್ಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧವೇ ಕೇಸು ದಾಖಲಿಸಲಾಗಿದೆ. ಮೃತ ಲಕ್ಷ್ಮಿ ಮತ್ತು ಗ್ರಾಮದ ಬೀರಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಲಕ್ಷ್ಮಿಯ ತಾಯಿ ಬಸಮ್ಮ ಅವರ ದೂರು ಆಧರಿಸಿ ಎಫ್ಆರ್ ದಾಖಲಿಸಲಾಗಿದೆ.
ಬೀರಪ್ಪ ಎಂಬುವವರ ಜೊತೆಗೆ ಲಕ್ಷ್ಮಿ ಅನೈತಿಕ ಸಂಬಂಧ ಹೊಂದಿದ್ದರು. ಹಲವು ಬಾರಿ ಜನರು ಬುದ್ಧಿವಾದ ಹೇಳಿದ್ದರೂ ಬದಲಾಗಿರಲಿಲ್ಲ. ನಿನ್ನೆ ಕೂಡ ಈ ವಿಚಾರ ಗ್ರಾಮದಲ್ಲಿ ಗೊತ್ತಾಗಿತ್ತು. ಹಿರಿಯರು ಬೀರಪ್ಪನನ್ನು ಕರೆದು ಬುದ್ಧಿಮಾತು ಹೇಳಿದ್ದರು. ಬೀರಪ್ಪ ಮಕ್ಕಳನ್ನು ಬಿಟ್ಟು ಬರುವಂತೆ ಲಕ್ಷ್ಮಿಗೆ ಪೀಡಿಸುತ್ತಿದ್ದ. ಅದೇ ಕಾರಣಕ್ಕೆ ಲಕ್ಷ್ಮಿ ಸಾವನ್ನಪ್ಪಿದ್ದಾಳೆ ಎಂದು ಉಲ್ಲೇಖಿಸಲಾಗಿದೆ.
ಪತಿ, ಮಕ್ಕಳನ್ನು ಬಿಟ್ಟು ಬಾ ಎಂದು ಬೀರಪ್ಪ ಪೀಡಿಸುತ್ತಿದ್ದ. ಇದರಿಂದ ಮಾನಸಿಕವಾಗಿ ನೊಂದು ಲಕ್ಷ್ಮಿ ಸಾವನ್ನಪ್ಪಿದ್ದಾಳೆ. ಲಕ್ಷ್ಮಿ, ಬೀರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಲಕ್ಷ್ಮಿ ತಾಯಿ ದೂರಿನ ಅನ್ವಯ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
