ಬೆಳಗಾವಿ: ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರದ ಚೆಕ್ ನೀಡಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ವಿಭಾಗದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ ಅಶೋಕ್ ಶಿರೂರ ಬಂಧಿತ ಅಧಿಕಾರಿ. ಮುಗಳಖೋಡ ಮತ್ತು ಹಾರೂಗೇರಿ ಪಟ್ಟಣಗಳಿಗೆ ಅಮೃತ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ರಾಯಭಾಗ ತಾಲೂಕಿನ ಖೇಮಲಾಪುರ ಗ್ರಾಮದ ಯಾಸಿನ್ ಪೆಂಡಾರಿಯವರ 14 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
ಅವರಿಗೆ ಪರಿಹಾರವಾಗಿ ಸರ್ಕಾರದಿಂದ ಮಂಜೂರಾದ 18 ಲಕ್ಷ ರೂಪಾಯಿ ಚೆಕ್ ನೀಡಲು ಒಂದು ಲಕ್ಷ ರೂಪಾಯಿ ಲಕ್ಷಕ್ಕೆ ಅಶೋಕ್ ಶಿರೂರ ಬೇಡಿಕೆ ಇಟ್ಟಿದ್ದರು. ಯಾಸಿನ್ ಪೆಂಡಾರಿ ಬೆಳಗಾವಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪಿಐ ನಿರಂಜನ ಪಾಟೀಲ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಲೋಕಾಯುಕ್ತ ಎಸ್ಪಿ ಹಣಮಂತರಾಯ ಮಾರ್ಗದರ್ಶನದಲ್ಲಿ ಸೋಮವಾರ ಕಾರ್ಯಚರಣೆ ನಡೆಸಿ ಅಶೋಕ ಶಿರೂರ ಅವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಗೋವಿಂದಗೌಡ ಪಾಟೀಲ, ರವಿ ಮಾವರ್ಕರ, ಗಿರೀಶ್, ಶಶಿಧರ, ಸುರೇಶ್, ಮಲ್ಲಿಕಾರ್ಜುನ ಭಾಗವಹಿಸಿದ್ದರು.
