ಬೆಂಗಳೂರು: ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿ ನಿರ್ಮಾಣ ಸಂಬಂಧ ನವೆಂಬರ್ 20ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು.
ಎಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು 100 ಕಚೇರಿಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದು, ಈ ವೇಳೆಗೆ ಎಲ್ಲಾ ಸಿದ್ಧತೆ ಪೂರ್ಣಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಗಡುವು ನೀಡಿದ್ದಾರೆ.
ಸಂಬಂಧಿಸಿದ ಉಸ್ತುವಾರಿ ಸಚಿವರು, ಶಾಸಕರು ಹಾಗೂ 2023ರ ಕಾಂಗ್ರೆಸ್ ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿ ಪರಿಶೀಲನೆ ನಡೆಸಿ ನಿವೇಶನ ಹೊಂದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ನಿವೇಶನ ಇಲ್ಲದಿದ್ದಲ್ಲಿ ಖರೀದಿಸಿ ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಲ್ಲಿ ನೋಂದಾಯಿಸಿ ನ.20ರ ವೇಳೆಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಗಾಂಧಿ ಭಾರತ -100 ವರ್ಷಾಚರಣೆ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಗಳಿಗೂ ಸ್ವಂತ ಕಚೇರಿ ಇರಬೇಕು. ಈ ಹಿನ್ನೆಲೆಯಲ್ಲಿ 100 ಕಚೇರಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
