ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ಆಟದ ಅವಧಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷೆ ನೆಪದಲ್ಲಿ ಆಟದ ಸಮಯ ಕಡಿತಗೊಳಿಸಬಾರದು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.
ಉತ್ತಮ ಫಲಿತಾಂಶ ತರುವ ಕಾರಣಕ್ಕೆ 10ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ಆಟದ ಸಮಯ ಕಡಿತಗೊಳಿಸಲಾಗುತ್ತಿದೆ. ಇದು ಮಕ್ಕಳ ಕಲಿಕೆ ಸೇರಿ ಸಮಗ್ರ ವ್ಯಕ್ತಿತ್ವ ವಿತಸನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಕಡ್ಡಾಯವಾಗಿ ಆಟದ ಸಮಯ ಅನುಸರಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲು ಶಿಕ್ಷಣ ಇಲಾಖೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮನವಿ ಮಾಡಿದೆ.
ಇಲಾಖೆಯ ಆಯುಕ್ತರಾದ ತ್ರಿಲೋಕ್ ಚಂದ್ರ ಅವರಿಗೆ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಪತ್ರ ಬರೆದಿದ್ದು, ರಾಜ್ಯದ ವಿವಿಧ ಭಾಗದ ಶಾಲೆಗಳಿಗೆ ಆಯೋಗದ ಸದಸ್ಯರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ವೇಳೆ ಉತ್ತಮ ಫಲಿತಾಂಶಕ್ಕಾಗಿ ಹತ್ತನೇ ತರಗತಿ ಮಕ್ಕಳು ವೇಳಾಪಟ್ಟಿಯಲ್ಲಿ ನಿಗದಿಗೊಳಿಸಿದ ಆಟದ ಅವಧಿಯಲ್ಲಿ ತರಗತಿ ಚಟುವಟಿಕೆ, ಪಠ್ಯ ಬೋಧನೆ, ಅಧ್ಯಯನಕ್ಕೆ ಹಚ್ಚುತ್ತಿರುವುದು ಕಂಡುಬಂದಿದೆ. ಆಟ, ಕಲೆ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸದ ಅವಿಭಾಜ್ಯ ಅಂಗವಾಗಿದೆ. ಆಟದ ಸಮಯ ಕಡಿತದಿಂದ ಮಕ್ಕಳ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಮಕ್ಕಳ ಹಕ್ಕಿನ ಉಲ್ಲಂಘನೆ ಆಗುವುದರಿಂದ ಶಾಲೆಗಳಲ್ಲಿ ಆಟದ ಅವಧಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಲಾಗಿದೆ.
