ನವದೆಹಲಿ: ಅಪ್ರಾಪ್ತ ವಯಸ್ಕರಾಗಿದ್ದಾಗ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ಪೋಷಕರು ಮಾರಾಟ ಮಾಡಿದ್ದಲ್ಲಿ ಅಂತಹ ಆಸ್ತಿ ವರ್ಗಾವಣೆಯನ್ನು ಆ ಮಕ್ಕಳು ಪ್ರಾಪ್ತ ವಯಸ್ಕರಾದ ನಂತರ ನಿರಾಕರಿಸಬಹುದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.
ಪ್ರಾಪ್ತ ವಯಸ್ಕರಾದ ಬಳಿಕ ಮಕ್ಕಳು ತಮ್ಮ ಪೋಷಕರು ನ್ಯಾಯಾಲಯದ ಅನುಮತಿ ಪಡೆಯದೆ ಮಾರಾಟ ಮಾಡಿದ ಆಸ್ತಿ ನಿರಾಕರಿಸಲು ಮೊಕದ್ದಮೆ ಹೂಡಬೇಕಾದ ಅಗತ್ಯವಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳು ಪ್ರಾಪ್ತ ವಯಸ್ಕರಾದ ನಂತರ ಸ್ವತಂತ್ರವಾಗಿ ಆ ಆಸ್ತಿಯನ್ನು ಮಾರಾಟ ಮಾಡುವ ಇಲ್ಲವೇ ವರ್ಗಾಯಿಸುವ ಮೂಲಕ ಹಿಂದಿನ ಆಸ್ತಿ ವರ್ಗಾವಣೆಯನ್ನು ನಿರಾಕರಿಸಬಹುದು ಎಂದು ಅಕ್ಟೋಬರ್ 7ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಆಸ್ತಿ ಮಾರಾಟ ನಿರಾಕರಿಸಲು ಮೊಕದ್ದಮೆ ಹೂಡಬೇಕು ಎನ್ನುವುದು ಕಡ್ಡಾಯವೇನಲ್ಲ ಎಂದು ದಾವಣಗೆರೆಯ ಕೆ.ಎಸ್. ಶಿವಪ್ಪ ವರ್ಸಸ್ ಕೆ. ನೀಲಮ್ಮ ಅವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಪ್ರಸನ್ನ ಬಿ. ವರಾಳೆ ಅವರ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.
