ಮುಂಗಾರು ಹಂಗಾಮಿನಲ್ಲಿ ಕೂರಿಗೆ ಮತ್ತು ನಾಟಿ ಮಾಡಿದ ಭತ್ತದ ಬೆಳೆಯು 45 ರಿಂದ 75 ದಿವಸಗಳವರೆಗಿನ ಅವಧಿಯ ಬೆಳೆ ಇದೆ. ಆದರ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ತುಂತುರು ಮಳೆ ಹಾಗೂ ತಾಪಮಾನದಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಉಂಟಾಗಿ ಅಲ್ಲಲ್ಲಿ ಕೀಟ ಮತ್ತು ರೋಗ ಭಾದೆಗಳನ್ನ ಕಂಡುಬರುತ್ತಿದ್ದು, ಸರಿಯಾಗಿ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಕ್ರಮದ ಮಾಹಿತಿಯನ್ನು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೆಶಕರು ರೈತರಿಗೆ ನೀಡಿದ್ದಾರೆ.
ಎಲೆ ಸುರುಳಿ ಹುಳು /ಕೊಳವೆ ಹುಳು: – ಈ ಹುಳುಗಳು ಮಡಚಿ ಕೊಳವೆ ಕೋಶದಲ್ಲಿ ಎಲೆಯನ್ನು ತಿನ್ನುತ್ತವೆ. ಸಾರಜನಕದ ಉಪಯೋಗವನ್ನು ಕಡಿಮೆಗೊಳಿಸಿ ಹಾಗೂ ಬದುಗಳನ್ನು ಸ್ವಚ್ಛಗೊಳಿಸುವುದು. ಕ್ವಿನಾಲ್ ಫಾಸ್ 2 ಮಿಲೀ ಅಥವಾ ಇಂಡಾಕ್ಸಿ ಕಾರ್ಬ್ 14.5 ಎಸ್ಸಿ 0.5 ಮಿಲಿ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳುವ ಮೂಲಕ ಹುಳುಗಳನ್ನು ಹತೋಟಿಗೆ ತರಬಹುದು.
ಕಾಂಡಕೊರೆಯುವ ಹುಳು:- ಸುಳಿ ಒಣಗುವುದು ಮತ್ತು ಬಿಳಿ ತೆನೆಯಾಗಿ ಕಾಳು ಜೊಳ್ಳಾಗುವುದರಲ್ಲಿ ಈ ಹುಳುಗಳು ಕಂಡು ಬರಲಿದ್ದು, ಕ್ಲೋರೋಪೈರಿಪಾಸ್ 2 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳುವ ಮೂಲಕ ಹುಳುಗಳನ್ನು ಹತೋಟಿಗೆ ತರಬಹುದು.
ಕಂದುಜಿಗಿ ಹುಳು:- ಈ ಹುಳುಗಳು ಭತ್ತದ ಕಾಂಡದ ಬುಡದಲ್ಲಿ ಗುಂಪಾಗಿ ರಸಹೀರುವುದರಿಂದ ಅಲ್ಲಲ್ಲಿ ಸಸಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ, ನಂತರ ಒಣಗಿ ಹೋಗಿ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತೆ ಕಾಣಲಿದೆ. ಸಾರಜನಕದ ಉಪಯೋಗವನ್ನು ಕಡಿಮೆಗೊಳಿಸಿ ಗದ್ದೆಯಲ್ಲಿ ನೀರನ್ನು ಬಸಿದು ಪ್ರತಿ 10 ಅಡಿಗೆ ಪೂರ್ವ ಪಶ್ಚಿಮಾಭಿಮುಖವಾಗಿ ಗಾಳಿ ಆಡುವಂತೆ ಪಾತಿ ಮಾಡುವುದು ಹಾಗೂ ಕ್ಲೋರೋಪೈರಿಪಾಸ್/ಪೋಸಲನ್ 2 ಮಿಲಿ ಅಥವಾ ಇಮಿಡಾ ಕ್ಲೋಪ್ರಿಡ್ 0.5 ಮಿಲಿ ಪ್ರತಿ ಲೀಟರ್ಗೆ ಬೆರೆಸಿ ಬುಡಕ್ಕೆ ಸಿಂಪಡಣೆ ಕೈಗೊಳ್ಳುವ ಮೂಲಕ ಹುಳುಗಳನ್ನು ಹತೋಟಿಗೆ ತರಬಹುದು.
ಬೆಂಕಿರೋಗ:- ಈ ರೋಗದಲ್ಲಿ ಎಲೆ ಮತ್ತು ಕಾಂಡದ ಮೇಲೆ ಕದಿರಿನ ಆಕಾರದ ಚುಕ್ಕೆ ಕಂಡು ಬರುತ್ತದೆ. ಈ ಚುಕ್ಕೆಗಳ ಅಂಚು ಕಂದು ಹಾಗೂ ಮಧ್ಯ ಭಾಗವು ಬೂದಿಬಣ್ಣದಿಂದ ಕೂಡಿರಲಿದ್ದು, ಕೊನೆಗೆ ಬೆಳೆ ಬೆಂಕಿಯಿಂದ ಸುಟ್ಟಂತೆ ಕಾಣುತ್ತದೆ.
ಟ್ರೈಸೈಕ್ಲೋಕೋಲ್ 0.6 ಗ್ರಾಂ, ಕಿಟಾಜಿನ್ 1 ಮಿಲೀ ಅಥವಾ ಕಾರ್ಬನ್ ಡೈಜಿಮ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸುವ ಮೂಲಕ ರೋಗವನ್ನು ಹತೋಟಿಗೆ ತರಬಹುದು.
ಎಲೆ ಕವಚದ ಮಚ್ಚೆ ರೋಗ:- ಈ ರೋಗದಲ್ಲಿ ಎಲೆ ಹೊದಿಕೆ ಮೇಲೆ ಅಂಡಾಕಾರದ ಚುಕ್ಕೆಗಳು ಕಂಡಬAದು ಬೂದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತದೆ ಹಾಗೂ ಕಂದು ಬಣ್ಣದ ಗುಂಗುರದಿಂದ ಅವೃತವಾಗಿರುತ್ತದೆ. ಶಿಲೀಂಧ್ರವು ನೀರಿನ ಮೇಲ್ಭಾಗದ ಗಿಡದ ಎಲ್ಲಾ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ. ಸಾರಜನಕದ ಉಪಯೋಗವನ್ನು ಕಡಿಮೆಗೊಳಿಸಿ, ಕಾರ್ಬನ್ ಡೈಜಿಮ್ 50 ಡಬ್ಲ್ಯೂ.ಪಿ 1 ಗ್ರಾಂ, ಮ್ಯಾಂಕೋಜಿಬ್ 75 ಡಬ್ಲ್ಯೂ.ಪಿ 2 ಗ್ರಾಂ ಅಥವಾ ಹೆಕ್ಸಾಕೋನಾಜೋಲ್ ಶೇ.5 ಎಸ್ಸಿ 2 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವ ಮೂಲಕ ರೋಗವನ್ನು ಹತೋಟಿಗೆ ತರಬಹುದು.
ದುಂಡಾಣು ಎಲೆ ಅಂಗಮಾರಿ ರೋಗ:- ಈ ರೋಗದಲ್ಲಿ ಎಲೆಗಳ ನರಗಳ ಮಧ್ಯದಲ್ಲಿ ಹಳದಿ ಅಥವಾ ಕಿತ್ತಳೆ ಬಣ್ಣದ ಉದ್ದನೆಯ ಮಚ್ಚೆಗಳು ಕಾಣುತ್ತವೆ. ಸ್ಟ್ರೇಪ್ಟೋಸೈಕ್ಲಿನ್ 0.6 ಗ್ರಾಂ ಪ್ರತಿ 16 ಲೀ ನೀರಿಗೆ ಜೊತೆಗೆ ತಾಮ್ರದ ಆಕ್ಸಿಕ್ಲೋರೈಡ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವ ಮೂಲಕ ರೋಗವನ್ನು ಹತೋಟಿ ತರಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.