ಬೆಂಗಳೂರು: ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣಕ್ಕೆ ಯುವಕರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿಗರ ಪ್ರಚೋದನಕಾರಿ ಭಾಷಣಕ್ಕೆ ಮರುಳಾಗಿ ಹೋರಾಟ ನಡೆಸಿದ ಅದೆಷ್ಟೋ ಯುವಕರು ಇಂದು ಜೈಲು ಸೇರಿ ಬೇಲ್ ಸಿಗದೇ ಪರದಾಡುತ್ತಿದ್ದಾರೆ. ಯುವಜನತೆ ಬಿಜೆಪಿ ನಾಯಕರ ಡೋಂಗಿ ಹಿಂದುತ್ವದ ಮಾತು ಕೇಳಬೇಡಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಆರ್.ಅಶೋಕ್ ಅವರೇ ನಿಮ್ಮ ಮಗನನ್ನು ಹೋರಾಟಕ್ಕೆ ಕಳುಹಿಸಿ. ಬಿಜೆಪಿ ನಾಯಕರ ಮಕ್ಕಳು ಎಂದಾದರೂ ಬೀದಿಗಿಳಿದು ಹೋರಾಡಿದ್ದಾರಾ? ತ್ರಿಶೂಲ ಕೈಲಿ ಹಿಡಿದಿದ್ದಾರಾ? ಬಡವರ ಮಕ್ಕಳನ್ನು ಮಾತ್ರ ಹೋರಟಕ್ಕೆ ತಳ್ಳುತ್ತಿದ್ದಾರೆ. ಹೋರಾಟ, ಪ್ರತಿಭಟನೆ ಹೆಸರಲ್ಲಿ ಜೈಲಿಗೆ ಹೋದರೆ ಬಿಡಿಸಿಕೊಂಡು ಬರಲು ನಿಮ್ಮ ಅಪ್ಪ-ಅಮ್ಮ, ಹೆಂಡತಿ ಬಂದು ಬೇಲ್ ಕೊಡಿಸಬೇಕು. ಬಿಜೆಪಿ ನಾಯಕರು ಬೆಂಗಳೂರಿನಿಂದ ಬಂದು ಜಾಮೀನು ಕೊಟ್ಟು ಬಿಡುಗಡೆ ಮಾಡಿಸುತ್ತಾರಾ? ಹೋರಾಡಿ ಜೈಲುಸೇರಿ ಬಿಡುಗಡೆಯಾಗಿ ಬಂದಿರಿ ಎಂದು ಬೆಂಗಳೂರಿನಲ್ಲಿ ಮನೆಗೆ ಕರೆದು ಸನ್ಮಾನಿಸುತ್ತಾರಾ? ಅದೆಷ್ಟೋ ಯುವಜನರು ಪ್ರಚೋದನಕಾರಿ ಭಾಷಣಕ್ಕೆ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ತಪ್ಪನ್ನು ಯುವಜನತೆ ಮಾಡಬೇಡಿ ಎಂದು ಬುದ್ಧಿಹೇಳಿದ್ದಾರೆ.
ಅಲ್ಲದೇ ಬಿಜೆಪಿಯವರದ್ದು ಬರಿ ಡೋಂಗಿ ಹಿಂದುತ್ವ. ಅವರ ಭಾಷಣ, ನಾಲಿಗೆಯಲ್ಲಿ ಮಾತ್ರ ರಾಮನಿದ್ದಾನೆ. ಆದರೆ ನಮ್ಮ ಮನಸ್ಸು, ಹೃದಯದಲ್ಲಿ ರಾಮನಿದ್ದಾನೆ ಎಂದು ಹೇಳಿದರು.