ಸೀತಾಪುರ: ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿಯೇ ಕೈ ಕೊಯ್ದುಕೊಂಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಪೂಜಾ ಮಿಶ್ರಾ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ. ಪೂಜಾ ಹಾಗೂ ಲಲಿತ್ ಮಿಶ್ರಾ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಲಲಿತ್ ಮಿಶ್ರಾ ಕೆಲಸದ ಕಾರಣಕ್ಕಾಗಿ ತನ್ನ ಸೋದರಳಿಯ ಅಲೋಕ್ ಮಿಶ್ರಾ ಎಂಬಾತನನ್ನು ಕರೆಸಿ ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದ. ಅಲೋಕ್, ಲಲಿತ್ ಮಿಶ್ರಾ ಪತ್ನಿ ಪೂಜಾಳಿಗಿಂತ 15 ವರ್ಷ ಚಿಕ್ಕವನು. ಆದರೂ ಅಲೋಕ್ ಹಾಗೂ ಪೂಜಾ ನಡುವೆ ಸ್ನೇಹ- ಪ್ರೀತಿಗೆ ತಿರುಗಿತ್ತು.
ಪತಿ, ಇಬ್ಬರು ಮಕ್ಕಳಿದ್ದರೂ ತನಗಿಂತ 15 ವರ್ಷ ಕಿರಿಯನ ಜೊತೆ ಪ್ರೀತಿ-ಪೇಮ ಎಂದು ಸುತ್ತಾಡತೊಡಗಿದ್ದಳು. ಪತ್ನಿ ಹಾಗೂ ಸಂಬಂಧಿಯ ಜೊತೆ ಇರುವ ಸಲುಗೆ ಕಂಡು ಪತಿ ಲಲಿತ್ ಪ್ರಶ್ನಿಸಿದ್ದಾನೆ. ಈ ವೇಳೆ ಮನೆಯಲ್ಲಿ ಗಲಾಟೆಯಾಗಿದ್ದು, ಪೂಜಾ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಅಲೋಕ್ ಜೊತೆ ಬರೇಲಿಗೆ ಹೊರಟು ಹೋದಳು. ಅಲ್ಲಿ ಇಬ್ಬರೂ ಒಟ್ಟಿಗೆ ಕೆಲ ವರ್ಷ ಕಳೆದಿದ್ದಾರೆ. ಕೆಲ ವರ್ಷಗಳಲ್ಲಿಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ, ಜಗಳ ಶುರುವಾಗಿದೆ. ಇದರಿಂದ ಪೂಜಾ ತನ್ನ ಊರಾದ ಸೀತಾಪುರಕ್ಕೆ ವಾಪಸ್ ಆಗಿದ್ದಾಳೆ.
ಈ ವೇಳೆ ಪೂಜಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಅಲೋಕ್ ನನ್ನು ಠಾಣೆಗೆ ಕರೆಸಿದ ಪೊಲೀಸರು ಇಬ್ಬರನ್ನೂ ವಿಚಾರಿಸಿದ್ದಾರೆ. ಈ ವೇಳೆ ಅಲೋಕ್ ಮಿಶ್ರಾ, ತಾನು ಪೂಜಾ ಜೊತೆ ಇರಲು ಇಷ್ಟಪಡುವುದಿಲ್ಲ. ಆಕೆಯಿಂದ ದೂರಾಗುವುದಾಗಿ ತಿಳಿಸಿದ್ದಾನೆ. ಅಲೋಕ್ ಮಾತುಕೇಳಿ ಆಘಾತಗೊಂಡ ಪೂಜಾ ತಕ್ಷಣ ಬ್ಲೇಡ್ ನಿಂದ ತನ್ನ ಕೈ ಕೊಯ್ದುಕೊಂಡು ರಂಪಾಟ ಮಾಡಿದ್ದಾಳೆ. ಮಣಿಕಟ್ಟು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಪೂಜಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.