ಮಂಗಳೂರು: ಸ್ನೇಹಿತೆಯರು ಬಟ್ಟೆ ಬದಲಾಯಿಸುವಾಗ ವಿಡಿಯೋ ಚಿತ್ರೀಕರಣ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಯುವತಿಯನ್ನು ಕದ್ರಿ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದ ಯುವತಿ ನಿರೀಕ್ಷಾ ಬಂಧಿತ ಆರೋಪಿ.
ಕಂಕನಾಡಿಯಲ್ಲಿ ಬಾಡಿಗೆ ಮನೆಯಲ್ಲಿ ನಿರೀಕ್ಷಾ ಹಾಗೂ ಸಂತ್ರಸ್ತ ಯುವತಿಯರು ವಾಸವಾಗಿದ್ದರು. ಯುವತಿಯರು ಕದ್ರಿ ಠಾಣೆಗೆ ದೂರು ನೀಡಿದ್ದು, ನಿರೀಕ್ಷಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾನುವಾರ ನಿರೀಕ್ಷಾ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಕಾರ್ಕಳದ ನಿಟ್ಟೆಯಲ್ಲಿ ಇತ್ತೀಚೆಗೆ ಅಭಿಷೇಕ್ ಆಚಾರ್ಯ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಡೆತ್ ನೋಟ್ ನಲ್ಲಿ ನಿರೀಕ್ಷಾ ತನ್ನ ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಬಂಧಿತಳಾಗಿರುವ ನಿರೀಕ್ಷಾ ಆ ವಿಡಿಯೋವನ್ನು ಅಭಿಷೇಕ್ ಗೂ ಕಳುಹಿಸಿದ್ದಳು. ಆ ವಿಡಿಯೋ ಅಭಿಷೇಕ್ ಅಡ್ಮಿನ್ ಆಗಿದ್ದ ವಾಟ್ಸಪ್ ಗ್ರೂಪ್ ನಲ್ಲಿ ಫಾರ್ವರ್ಡ್ ಆಗಿತ್ತು ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.