ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ಪೋಷಕಾಂಶ ಹೊಂದಿದ ಪದಾರ್ಥ ಒಳಗೊಂಡ ಇಂದಿರಾ ಕಿಟ್ ವಿತರಿಸಲಾಗುವುದು.
ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ತೊಗರಿ ಬೇಳೆ, ಅಡುಗೆ ಎಣ್ಣೆ, ಹೆಸರು ಕಾಳು, ಸಕ್ಕರೆ, ಉಪ್ಪು ಖರೀದಿಗೆ ಪ್ರತ್ಯೇಕ ಟೆಂಡರ್ ಕರೆದು, ಪ್ಯಾಕಿಂಗ್ ಮಾಡುವುದು, ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗೆ ಸಾಗಾಣೆ ಮಾಡಲು ಖಾಸಗಿ ಏಜೆನ್ಸಿಗೆ ಹೊಣೆ ವಹಿಸುವುದು ಸೇರಿ ಇತ್ಯಾದಿ ಕಾರ್ಯ ಚಟುವಟಿಕೆಗಳ ರೂಪುರೇಷೆ ಸಿದ್ದಪಡಿಸಲಾಗಿದೆ.
ಅಕ್ಕಿ ಬದಲಿಗೆ ನಗದು ವರ್ಗಾವಣೆ ವ್ಯವಸ್ಥೆಯನ್ನು 2023ರ ಜುಲೈ 10 ರಿಂದ ಸರ್ಕಾರ ಜಾರಿಗೊಳಿಸಿದ್ದು 2025ರ ಜನವರಿಗೆ ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತಿತ್ತು. ಫೆಬ್ರವರಿಯಿಂದ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ ಐದು ಕೆಜಿ ವಿತರಿಸಲಾಗುತ್ತಿದೆ.
ಇದರಿಂದ ಸರ್ಕಾರಕ್ಕೆ ವಾರ್ಷಿಕ 6430 ಕೋಟಿ ರೂ. ಬೇಕಾಗುತ್ತದೆ. ಕಿಟ್ ವಿತರಣೆಗೆ 6119 ಕೋಟಿ ರೂ ಖರ್ಚಾಗುತ್ತದೆ. ಇದರಿಂದ ಸರ್ಕಾರಕ್ಕೆ ಸುಮಾರು 300 ಕೋಟಿ ರೂ.ವರೆಗೆ ಉಳಿತಾಯವಾಗುತ್ತದೆ. ಹೀಗಾಗಿ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಗೆ ಇಂದಿರಾ ಕಿಟ್ ವಿತರಿಸಲಾಗುವುದು. ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಕಿಟ್ ನಲ್ಲಿ ಇರುತ್ತದೆ. ಸದಸ್ಯರ ಆಧಾರದಲ್ಲಿ ಆಹಾರ ಧಾನ್ಯ ಕಿಟ್ ವಿತರಿಸಲಾಗುವುದು. ಈ ಯೋಜನೆ ಒಂದೆರಡು ತಿಂಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ.