ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಮತದಾನ ಆರಂಭವಾಗಿದೆ. ಸರತಿ ಸಾಲಿನಲ್ಲಿ ಆಗಮಿಸಿ ಮತದಾನ ಮಾಡುತ್ತಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕರ ಸ್ಥಾನಕ್ಕೆ ಈಗಾಗಲೇ 9 ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಳಿದ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.
ಅಥಣಿ ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ನಿಪ್ಪಾಣಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಉತ್ತಮ ಪಾಟೀಲ್ ಸ್ಪರ್ಧಿಸಿದ್ದಾರೆ.
ಹುಕ್ಕೇರಿ ಮಾಜಿ ಸಂಸದ ರಮೇಶ್ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ್, ಚನ್ನಮ್ಮನ ಕಿತ್ತೂರಿನಿಂದ ನಾನಾಸಾಹೇಬ ಪಾಟೀಲ್ ವಿರುದ್ಧ ವಿಕ್ರಮ ಇನಾಮದಾರ, ರಾಯಬಾಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡ ವಿರುದ್ಧ ಬಸಗೌಡ ಅಸಂಗಿ, ರಾಮದುರ್ಗದಲ್ಲಿ ಶ್ರೀಕಾಂತ್ ಢವಣ ವಿರುದ್ಧ ಮಲ್ಲಣ್ಣ ಯಾದವಾಡ, ಬೈಲಹೊಂಗದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್ ಸ್ಪರ್ಧಿಸಿದ್ದಾರೆ. ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.