HomeLatest Newsಗ್ರಾಮೀಣ ಜನತೆಗೆ ಗುಡ್ ನ್ಯೂಸ್: ರಾಜ್ಯದ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ‘ಇ-ಸ್ವತ್ತು’ ಪಡೆಯಲು ಅವಕಾಶ

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ರಾಜ್ಯದ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ‘ಇ-ಸ್ವತ್ತು’ ಪಡೆಯಲು ಅವಕಾಶ

ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ 1993ಕ್ಕೆ ತಿದ್ದುಪಡಿ ತರುವ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿತರಿಸಲಾಗುವ ನಿರಾಕ್ಷೇಪಣ(NOC) ಪರವಾನಗಿ, ತೆರಿಗೆಗಳು, ಶುಲ್ಕ ಹಾಗೂ ದರಗಳನ್ನು ವೈಜ್ಞಾನಿಕವಾಗಿ ನಿಗದಿಮಾಡಿದ್ದು, ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗುವುದು.

ಈ ನಿಯಮಗಳ ಜಾರಿಯಿಂದ 95,75,935 ಆಸ್ತಿಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ನಿಯಮಗಳಂತೆ ಹದಿನೈದು ದಿನಗಳೊಳಗಾಗಿ ತಂತ್ರಾಂಶದಲ್ಲಿ ತಾಂತ್ರಿಕ ಬದಲಾವಣೆಗಳನ್ನು ತಂದು ಗ್ರಾಮೀಣ ಜನರಿಗೆ ಸೌಲಭ್ಯವನ್ನು ಒದಗಿಸಲಾಗುವುದು.

ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಾಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಯಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-272ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಹಿತದೃಷ್ಟಿಯಿಂದ ‘ಎಲ್ಲ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಆರಂಭಿಸಲಾಗುವುದು’ ಎಂದು ಘೋಷಿಸಲಾಗಿತ್ತು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ 1993ವನ್ನು ದಿನಾಂಕ: 07.04.2025 ರಂದು ಅಧಿಸೂಚಿಸಿ ಪ್ರಕರಣ 199(ಬಿ) ಹಾಗೂ ಪ್ರಕರಣ 199(ಸಿ) ಅನ್ನು ಸೇರಿಸಲಾಗಿದೆ. ಪ್ರಕರಣ 199 (ಬಿ) ಸ್ವತ್ತುಗಳಿಗೆ ಖಾತಾ ಅಥವಾ ಪಿಐಡಿ ನೀಡುವ ಕುರಿತಂತೆ ಹಾಗೂ ಪ್ರಕರಣ 199(ಸಿ) ಕಟ್ಟಡ ಮತ್ತು ಪರಿವರ್ತನೆಯಾಗದೇ ಇರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳ ಮೇಲೆ ಉಲ್ಲೇಖಿಸುತ್ತದೆ. ಈ ತಿದ್ದುಪಡಿಯನ್ನು ಆಧರಿಸಿ ಅಸ್ತಿತ್ವದಲ್ಲಿದ್ದ ತೆರಿಗೆ ನಿಯಮಗಳು 2021ನ್ನು ನಿರಸನಗೊಳಿಸಿ ಹೊಸದಾಗಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸಲಾಗಿದೆ. ಈ ನಿಯಮಗಳ ಜಾರಿಯಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುವುದು.

ಗ್ರಾಮ ಪಂಚಾಯತಿಯ ಎಲ್ಲ ಆಸ್ತಿಗಳ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕ ಒದಗಿಸಿ ತಮ್ಮ ಆಸ್ತಿಗಳ ಮಾಹಿತಿಯನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಗಳ ತೆರಿಗೆಯನ್ನು ಗ್ರಾಮ ಪಂಚಾಯತಿಗೆ ಪಾವತಿಸುವ ಮೂಲಕ ದಾಖಲೆ ಪಡೆಯಲು ಹಾಗೂ ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲಗಳನ್ನು ವೃದ್ಧಿಗೊಳಿಸುವುದರ ಮೂಲಕ ಗ್ರಾಮ ಪಂಚಾಯತಿಯ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲಿದೆ.

ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧಾರ, ವಸೂಲಿ ಅಥವಾ ವಿಧಿಸುವಿಕೆಯಿಂದ ಬಾಧಿತನಾದ ಯಾವುದೇ ವ್ಯಕ್ತಿಯು ಉಪ ಕಾರ್ಯದರ್ಶಿ (ಅಭಿವೃದ್ದಿ) ಅವರಿಗೆ ಮೊದಲನೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಸದರಿ ಆದೇಶದಿಂದ ಬಾಧಿತನಾದ ವ್ಯಕ್ತಿಯು ಎರಡನೇ ಮೇಲ್ಮನವಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ತೆರಿಗೆ, ದರ ಹಾಗೂ ಶುಲ್ಕಗಳನ್ನು ನಿಗದಿ ಮಾಡುವುದರಿಂದ ಮತ್ತು ಪರವಾನಗಿ, ನಿರಾಕ್ಷೇಪಣ ಪತ್ರಗಳನ್ನು ಕ್ರಮಬದ್ಧವಾಗಿ ಮತ್ತು ಕಾಲಮಿತಿಯೊಳಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ನೀಡುವುದರಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲದ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಸ್ವಯಂ ಸರ್ಕಾರಗಳಾಗಿ ಗ್ರಾಮ ಪಂಚಾಯತಿಗಳು ತಮ್ಮ ಅಭಿವೃದ್ಧಿಯನ್ನು ತಾವೇ ನಿರ್ಧರಿಸುವ ದಿಸೆಯಲ್ಲಿ ಇದೊಂದು ಮಹತ್ತರ ಹಾಗೂ ಐತಿಹಾಸಿಕ ನಡೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular