ಬೆಂಗಳೂರು: ರಾಜ್ಯಕ್ಕೆ ಪ್ರವೇಶಿಸಿರುವ ಈಶಾನ್ಯ ಮಾರುತಗಳು ಚುರುಕುಗೊಂಡಿದ್ದು, ಇದರ ಪರಿಣಾಮ ಕರಾವಳಿ, ಮಲೆನಾಡು, ದಕ್ಷಿಣ ಕರ್ನಾಟಕ ಭಾಗದಲ್ಲಿ ಮೂರು ದಿನ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಅಕ್ಟೋಬರ್ 19 ರಿಂದ 21 ರವರೆಗೆ ಹೆಚ್ಚಿನ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಎರಡು ದಿನ ಗುಡುಗು ಸಹಿತ ಜೋರಾಗಿ ಮಳೆ ಆಗುವ ಸಾಧ್ಯತೆಯಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಚಾಮರಾಜನಗರ, ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಅಕ್ಟೋಬರ್ 19ರಂದು, ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ ಚಿಕ್ಕಬಳ್ಳಾಪುರದಲ್ಲಿ ಅಕ್ಟೋಬರ್ 23ರಂದು ಭಾರಿ ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಧಾರವಾಡ, ಗದಗ, ಹಾವೇರಿ, ಚಿತ್ರದುರ್ಗ ಸೇರಿ ಕೆಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಆಗಲಿದೆ.