ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಮನೆ ಸೇರಿ ಕಲಬುರಗಿಯ ಹಲವು ಕಡೆಗಳಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಸಿದ್ದಾರೆ.
ಆಳಂದದಲ್ಲಿರುವ ಸುಭಾಷ್ ಗುತ್ತೇದಾರ ಅವರ ಮನೆಯ ಎದುರಲ್ಲಿ ಅಪಾರ ಸಂಖ್ಯೆಯ ಮತದಾರರ ಪಟ್ಟಿ ಮತದಾರರ ಚೀಟಿಗಳನ್ನು ಸುಟ್ಟಿರುವುದು ಪತ್ತೆಯಾಗಿದೆ. ಆಳಂದದ ಆರ್ಎಸ್ಕೆ ಕಾಲೋನಿಯಲ್ಲಿರುವ ಗುತ್ತೇದಾರ ಅವರ ಮನೆಯ ಎದುರು ಅಪಾರ ಪ್ರಮಾಣದ ಕಾಗದ ಪತ್ರಗಳ ರಾಶಿಗೆ ಬೆಂಕಿ ಹಚ್ಚಿ ಸುಡಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಎಸ್ಐಟಿ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿ ಪರಿಶೀಲಿಸಿದೆ. ಅರೆಬರೆ ಸುಟ್ಟ ಕಾಗದ ಪತ್ರಗಳನ್ನು ಮಿನಿ ಟ್ರಕ್ ವೊಂದರಲ್ಲಿ ಶಕಾಪುರ ಸೇತುವೆ ಸಮೀಪ ಕೊಂಡೊಯ್ದು ಅಮರ್ಜಾ ನದಿಗೆ ಎಸೆಯಲಾಗಿದೆ. ಮಿನಿ ಟ್ರಕ್ ಬೆನ್ನಟ್ಟಿದ ಎಸ್ಐಟಿ ಅಧಿಕಾರಿಗಳು ಮತ್ತು ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನದಿಗೆ ಎಸೆದಿದ್ದ ಸುಟ್ಟ ಕಾಗದ ಪತ್ರಗಳನ್ನು ಕೂಡ ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ.