ಬೆಂಗಳೂರು: ಮುಂದಿನ ತಿಂಗಳು 49,000 ಮನೆಗಳನ್ನು ವಸತಿ ಯೋಜನೆ ಫಲಾನುಭವಿ ಬಡವರಿಗೆ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಹಂಚಿಕೆಯಾದ ಬಳಿಕ ಮನೆ ನಿರ್ಮಿಸಿದ ಗುತ್ತಿಗೆದಾರರಿಗೆ 900 ಕೋಟಿ ರೂ.ಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಗುತ್ತಿಗೆದಾರರ ಬಿಲ್ ಬಾಕಿ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಇಲಾಖೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ, ರಾಜೀವ್ ಗಾಂಧಿ ವಸತಿ ಯೋಜನೆಯಿಂದ ಒಟ್ಟು 2.30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನನ್ನ ಇಲಾಖೆಯಲ್ಲಿ 9500 ಕೋಟಿ ಬಿಲ್ ಬಾಕಿ ಇತ್ತು. ಒಂದು ಮನೆ ಕಟ್ಟಲು 7.5 ಲಕ್ಷ ರೂಪಾಯಿ ಬೇಕು. ಇದರಲ್ಲಿ ಫಲಾನುಭವಿಗಳಿಗೆ ಸರ್ಕಾರ ಮೂರು ಲಕ್ಷ ರೂ. ನೀಡುತ್ತದೆ. ಬಾಕಿ 4.5 ಲಕ್ಷ ರೂ.ಗಳನ್ನು ಫಲಾನುಭವಿಗಳು ಭರಿಸಲಾಗುತ್ತಿಲ್ಲ. ಹಾಗಾಗಿ ನಮ್ಮ ಸರ್ಕಾರ ಬಂದ ಮೇಲೆ ಫಲಾನುಭವಿಗಳು ನೀಡುವ ಹಣವನ್ನು ಸರ್ಕಾರವೇ ಭರಿಸಲು ತೀರ್ಮಾನಿಸಿ ಹಂತ ಹಂತವಾಗಿ ಬಿಲ್ ಪಾವತಿಸಲಾಗುತ್ತದೆ ಎಂದು ಹೇಳಿದ್ದಾರೆ.