ಬೆಂಗಳೂರು: ಬೆಂಗಳೂರಿನಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ, ಅನಿಲ ತಯಾರಿಕೆ ಸಂಬಂಧದ ಒಪ್ಪಂದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮುಖ್ಯ ಆಯುಕ್ತ ಡಾ. ಮಹೇಶ್ವರ್ ರಾವ್ ಹಾಗೂ ಭಾರತೀಯ ಅನಿಲ ಪ್ರಾಧಿಕಾರದ(ಗೇಲ್) ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎನ್ ಯಾದವ್ ಅವರು ವಿಧಾನಸೌಧದಲ್ಲಿ ಇಂದು ಸಹಿ ಹಾಕಿ, ಕಡತ ವಿನಿಮಯ ಮಾಡಿಕೊಂಡರು.
ಬೆಂಗಳೂರಿನಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಸಂಬಂಧ ಗೇಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಮಾಧ್ಯಮದವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಇವತ್ತು ಕರ್ನಾಟಕ ಸರ್ಕಾರವು ಸುಮಾರು 500 ಟನ್ ನಷ್ಟು ಹಸಿ ತ್ಯಾಜ್ಯವನ್ನು ಕೇಂದ್ರ ಸರ್ಕಾರದ ಗೇಲ್(ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್) ಸಂಸ್ಥೆಗೆ ಕೊಟ್ಟು ಗ್ಯಾಸ್ ತಯಾರಿಸಬೇಕೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಗೇಲ್ ಸಂಸ್ಥೆಗೆ ಜಾಗವನ್ನು ಸಹ ಕೊಟ್ಟಿದ್ದೇವೆ. 123 ಕೋಟಿ ರೂಪಾಯಿಯಷ್ಟು ಸ್ವಂತ ಖರ್ಚಿನಲ್ಲಿ ಗ್ಯಾಸ್ ತಯಾರಿಸುವ ಘಟಕವನ್ನು ಪ್ರಾರಂಭಿಸುತ್ತಿದ್ದಾರೆ. ಘಟಕದಲ್ಲಿ ಹಸಿ ತ್ಯಾಜ್ಯದಿಂದ ಗ್ಯಾಸ್ ತಯಾರಿಸಿ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ, ಹೊಟೇಲ್ಗಳಿಗೆ ವಿತರಣೆ ಮಾಡುವ ವ್ಯವಸ್ಥೆಯನ್ನು ಗೇಲ್ ಸಂಸ್ಥೆಯವರು ಮಾಡಿಕೊಂಡಿದ್ದಾರೆ ಎಂದರು.
ಹಸಿ ತ್ಯಾಜ್ಯದಿಂದ ಮೊದಲನೇ ಬಾರಿಗೆ ಗ್ಯಾಸ್ ತಯಾರಿಸಲು ಬೆಂಗಳೂರಿನಲ್ಲಿ ನಾವು ಅವಕಾಶವನ್ನು ಮಾಡಿಕೊಟ್ಟಿದ್ದೇವೆ. ಇನ್ಮುಂದಿನ ದಿನಗಳಲ್ಲಿ ಅನೇಕ ಒಪ್ಪಂದಗಳನ್ನು ಮಾಡಿಕೊಳ್ಳಲು ನಾವು ಸಿದ್ಧರಿದ್ದು, ಒಣ ತ್ಯಾಜ್ಯ, ಹಸಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಈಗಾಗಲೇ ಕ್ರಮವನ್ನು ಕೈಗೊಂಡಿದ್ದೇವೆ ಎಂದರು.
ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಹತ್ವವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರದ ಅಧಿಕಾರಿಗಳು, ಜಿಬಿಎ ಆಯುಕ್ತರು, ಘನ ತ್ಯಾಜ್ಯ ನಿರ್ವಹಣಾ ಅಧಿಕಾರಿಗಳು, ಮಹೇಶ್ವರ್ ರಾವ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸೇರಿ ಗೇಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಹಿ ಮಾಡಿದ್ದಾರೆ. ಬೆಂಗಳೂರು ನಗರದ ಕಸ ನಿಯಂತ್ರಣಕ್ಕೆ ಬರಲಿ, ಸಾರ್ವಜನಿಕರಿಗೂ ಅನುಕೂಲವಾಗಲಿ, ಗ್ಯಾಸ್ ಕೂಡ ತಯಾರಾಗಲಿ ಎಂದು ಹೇಳಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಬೆಂಗಳೂರು ಘನ ತ್ಯಾಜ್ಯ ವಿಲೇವಾರಿ ನಿಯಮಿತದ ಸಿಇಓ ಕರೀಗೌಡ ಮತ್ತಿರರು ಉಪಸ್ಥಿತರಿದ್ದರು.