ಬೆಂಗಳೂರು: ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ 200 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಕಬಳಿಕೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿಗಳಿಗೆ ಸರ್ಕಾರಿ ಜಮೀನು ಮಾರಾಟ ಮಾಡಲಾಗಿದೆ. ಬೆಂಗಳೂರು ಡಿಸಿ ಕಚೇರಿ ಸಹಾಯಕ ಪ್ರಶಾಂತ್ ಗೌಡ ಕಾನೂನು ಉಲ್ಲಂಘನೆ ಮಾಡಿ ಸರ್ಕಾರಿ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕೆಲ ಭ್ರಷ್ಟ ಅಧಿಕಾರಿಗಳೂ ಕೂಡ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಎಡಿಎಲ್ ಆರ್ ಸಚಿನ್, ಜಿಡಿಎಲ್ ಆರ್ ನಿಸ್ಸಾರ್ ಅಹ್ಮದ್, ತಹಶೀಲ್ದಾರ್ ಶ್ರೀನಿವಾಸ್, ವಿಶೇಷ ತಹಶೀಲ್ದಾರ್ ನಾಗರಾಜ್, ಎಸಿ ರಜನಿಕಾಂತ್, ಆರ್ ಐ ನವೀನ್ ಸೇರಿದಂತೆ ಹಲವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಎಂ. ಮಂಜುನಾಥ್, ಆರ್.ಶೋಭಾ ಮಂಜುನಾಥ್, ಉಮೇಶ್ ಬಾಬು, ಜಲಜದಾಸ್ ಹಾಗೂ ಬಿ.ಕೆ.ರಾಘವೇಂದ್ರ ಅವರು ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಒಟ್ಟು 200 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪ್ರಭಾವಿಗಳಿಗೆ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಭಾರಿ ನಷ್ಟವುಂಟು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.