ಬೀದರ್ : ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರೈತರ ಬೆಳೆಗಳು, ಮನೆಗಳು, ರಸ್ತೆ ಹಾಗೂ ಜಾನುವಾರುಗಳಿಗೆ ಉಂಟಾದ ಭಾರೀ ಹಾನಿಯನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿಗಳು ಘೋಷಿಸಿರುವ ಪ್ರತಿ ಹೆಕ್ಟೇರ್‌ಗೆ ಹೆಚ್ಚುವರಿ ₹8,500 ರೂ. ಪರಿಹಾರವನ್ನು ಒಳಗೊಂಡಂತೆ ಒಟ್ಟು ₹300 ಕೋಟಿ ರೂ. ಪರಿಹಾರ ಮೊತ್ತವನ್ನು ಅಕ್ಟೋಬರ್ 30ರೊಳಗೆ ಪಾವತಿಸಲಾಗುವುದು ಎಂದು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಈಗಾಗಲೇ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದಂತೆ ₹170 ಕೋಟಿ ರೂ. ಪರಿಹಾರ ಪಾವತಿಸಲಾಗುತ್ತಿದ್ದು, ಉಳಿದ ಮೊತ್ತವನ್ನು ಕೂಡ ಅಕ್ಟೋಬರ್ 30ರೊಳಗೆ ವಿತರಿಸಲಾಗುವುದು.ಮನೆ ಹಾನಿ, ಬೆಳೆ ಹಾನಿ, ಜಾನುವಾರು ಹಾನಿ ಹಾಗೂ ಜೀವ ಹಾನಿಗೆ ದೀಪಾವಳಿಯೊಳಗೆ ಪರಿಹಾರ ನೀಡಲು ತಹಶೀಲ್ದಾರರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬಸವಕಲ್ಯಾಣ, ಭಾಲ್ಕಿ ಹಾಗೂ ಬೀದರ್ ತಾಲೂಕುಗಳಲ್ಲಿ ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿರುವ ಕುರಿತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡು, ಇಂದು ಅಥವಾ ನಾಳೆ ಸಂಜೆ ವೇಳೆಗೆ ಪರಿಹಾರ ಮೊತ್ತ ಸಂತ್ರಸ್ತರ ಖಾತೆಗೆ ತಲುಪಬೇಕು ಎಂದು ಸ್ಪಷ್ಟ ಸೂಚನೆ .ವಿಳಂಬ, ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
ಪಾರದರ್ಶಕತೆಗಾಗಿ ಪರಿಹಾರ ಪೋರ್ಟಲ್ ಮಾಹಿತಿ ಬಹಿರಂಗಪಡಿಸಲು ಆದೇಶ:
ಪರಿಹಾರ ಪೋರ್ಟಲ್‌ನಲ್ಲಿ ದಾಖಲಾಗುತ್ತಿರುವ ಪ್ರತಿಯೊಂದು ಮಾಹಿತಿಯನ್ನೂ ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಹಶೀಲ್ದಾರರ ಕಚೇರಿಗಳಲ್ಲಿ ಬಹಿರಂಗವಾಗಿ ಪ್ರಕಟಿಸಿ, ಯಾವುದೇ ಸಂತ್ರಸ್ತರ ಹೆಸರು ಕಣ್ತಪ್ಪದೆ ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ
ಬೆಳೆ ಋತುವಿನ ಮಧ್ಯದಲ್ಲಿ ವಿಕೋಪ ಉಂಟಾದರೆ ಪರಿಹಾರ ಕಲ್ಪಿಸುವ “ಮಿಡ್ ಸೀಸನ್ ಅಡ್ವರ್ಸಿಟಿ” ನಿಯಮವನ್ನು ತಕ್ಷಣ ಜಾರಿಗೆ ತರಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆನು. ಇದರಿಂದ ರೈತರಿಗೆ ನ್ಯಾಯಸಂಗತ ಪರಿಹಾರ ದೊರಕಲಿದೆ.
ಬಸವಕಲ್ಯಾಣದಲ್ಲಿ ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆಯ ಕುರಿತು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಉಲ್ಲೇಖಿಸಿದಾಗ, ನಾನು ಆಘಾತ ವ್ಯಕ್ತಪಡಿಸಿ, ಇಂತಹ ಘಟನೆಗಳು ಮರುಕಳಿಸದಂತೆ ವಿದ್ಯುತ್ ತಂತಿಗಳಿಗೆ ಕವರ್ ಕಂಡಕ್ಟರ್ ಅಳವಡಿಸಲು ಎಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ತಾಲೂಕಿನಲ್ಲಿ ಎಷ್ಟು ಜೀವಹಾನಿ, ಎಷ್ಟು ಬೆಳೆ ಹಾನಿ, ಮನೆ ಹಾನಿ ಹಾಗೂ ರಸ್ತೆ ಹಾನಿ ಸಂಭವಿಸಿದೆ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ತತ್‌ಕ್ಷಣ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕು ಎಂದು ಎಲ್ಲಾ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಳೆಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರ, ಕಾರ್ಮಿಕರ ಮತ್ತು ಕುಟುಂಬಗಳ ಕಷ್ಟವನ್ನು ಸರ್ಕಾರ ಸಂಪೂರ್ಣವಾಗಿ ಮನದಟ್ಟು ಮಾಡಿಕೊಂಡಿದೆ. ಹಾನಿಗೊಳಗಾದ ಪ್ರತಿಯೊಬ್ಬ ಸಂತ್ರಸ್ತನಿಗೂ ನ್ಯಾಯ ದೊರಕುವವರೆಗೆ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.