ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಉಡುಪು ಕಾರ್ಖಾನೆ ಮತ್ತು ರಾಸಾಯನಿಕ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ.
ಢಾಕಾದ ಮಿರ್ಪುರ್ ಪ್ರದೇಶದಲ್ಲಿ ಉಡುಪು ಕಾರ್ಖಾನೆ ಮತ್ತು ರಾಸಾಯನಿಕ ಗೋದಾಮು ಹೊಂದಿರುವ ಎರಡು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಕಾರ್ಖಾನೆಯ ಮೊದಲ ಮತ್ತು ಎರಡನೇ ಮಹಡಿಗಳಿಂದ ಒಂಬತ್ತು ಶವಗಳನ್ನು ಹೊರತೆಗೆದಿದ್ದಾರೆ.
ಅವರೆಲ್ಲರೂ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಸಾವನ್ನಪ್ಪಿದ್ದಾರೆ ಎಂದು ನಾವು ಶಂಕಿಸಿದ್ದೇವೆ ಎಂದು ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ನಿರ್ದೇಶಕ(ಕಾರ್ಯಾಚರಣೆ ಮತ್ತು ನಿರ್ವಹಣೆ) ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ತಾಜುಲ್ ಇಸ್ಲಾಂ ಚೌಧರಿ ವರದಿಗಾರರಿಗೆ ತಿಳಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಮತ್ತು ಅಗ್ನಿಶಾಮಕ ದಳದವರು ಉಡುಪು ಕಾರ್ಖಾನೆಯಲ್ಲಿ ಶೋಧ ನಡೆಸುತ್ತಿದ್ದಾರೆ.