ವಿಜಯಪುರ: ಹೊಸ ಪಕ್ಷ ಕಟ್ಟಲು ಹೊರಟಿದ್ದ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶಿವಸೇನಾ ಶಿಂಧೆ ಬಣದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಯಾವುದೇ ರಾಜಕೀಯ ಪಕ್ಷಕ್ಕೆ ನಾನು ಸೇರ್ಪಡೆಯಾಗಲ್ಲ. ಹಿಂದೂ ಮತ ವಿಭಜನೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು ಯತ್ನಾಳ್ ಅವರೇ, ನೀವೇ ಒಂದು ಪಕ್ಷ ಕಟ್ಟಿ ಅದರಿಂದ ಕಾಂಗ್ರೆಸ್ ಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದರು. ಹಾಗಾಗಿ ಹಿಂದೂ ಮತ ವಿಭಜನೆಯಾಗಬಾರದು. ಹಿಂದೂ ಮತ ವಿಭಜನೆಯಾಗುವಂತಹ ಕೆಟ್ಟ ಕೆಲಸ ನಾನೆಂದೂ ಮಾಡುವುದಿಲ್ಲ. ಆದಾಗ್ಯೂ ಬಿಜೆಪಿಯವರಿಗೆ ಯಡಿಯೂರಪ್ಪ ಕುಟುಂಬದವರೇ ಬೇಕೆಂದರೆ ನಾನೇನೂ ಮಾಡಲು ಆಗದು. ಯಡಿಯೂರಪ್ಪ ಕುಟುಂಬ ಬಿಟ್ಟು ಬಿಜೆಪಿ ಕಟ್ಟಿದರೆ ನಾನು ಬಿಜೆಪಿಗೆ ಹೋಗುತ್ತೇನೆ. ನಾನು ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಹೋಗಲ್ಲ ಎಂದರು.
ನನ್ನೊಂದಿಗೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿಲ್ಲ. ನಾನು ಬೇರೆ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ. ನಾನು ಹಿಂದುತ್ವದ ಪರವಾಗಿ ಓಡಾಡುತ್ತಿದ್ದೇನೆ ಹಿಂದೂ ಮತಗಳು ವಿಭಜನೆಯಾಗಬಾರದು ಎಂಬುದು ನನ್ನ ಗುರಿ ಎಂದರು.
ಮೊನ್ನೆ ಮಂಡ್ಯ, ಕೆರಗೋಡಿಗೆ ಹೋಗಿದ್ದೆ ಅಲ್ಲಿ ಎಲ್ಲಾ ಹಿಂದೂ ಕಾರ್ಯಕರ್ತರು ನನ್ನ ಮೇಲೆ ಹುಮಳೆಗರೆದು ನೀವು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಹಿಂದುತ್ವ ಉಳಿಯುತ್ತದೆ ಎಂದು ಹೇಳಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಎಲ್ಲಾ ಜನರು ಹೇಳುತ್ತಿದ್ದಾರೆ. ನಾನು ಸುಮ್ಮನೇ ಯಡಿಯೂರಪ್ಪ ತರ ಹೇಳಿಕೊಂಡು ಓಡಾಡಲ್ಲ, ಜನರ ಅಪೇಕ್ಷೆ ಏನಿದೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನಮ್ಮ ಸರ್ಕಾರ ಬಂದರೆ ಈಗ ಏನು ಹಿಂದುಗಳ ಮೇಲೆ ಕಲ್ಲೆಸೆಯುವ ಪ್ರಕರಣ ನಡೆಯುತ್ತಿದೆ ಅದೆಲ್ಲ ಬಂದ್ ಆಗುತ್ತೆ. ಮಸೀದಿಗಳು ಬಂದ್ ಆಗುತ್ತೆ. ರಾಜ್ಯದಲ್ಲಿರುವ ಎಲ್ಲಾ ಅಕ್ರಮ ಮಸೀದಿಗಳನ್ನು ಜೆಸಿಬಿ ಮೂಲಕ ಸ್ವಚ್ಛ ಮಾಡುತ್ತೇವೆ ಎಂದು ಹೇಳಿದರು.