ಹುಬ್ಬಳ್ಳಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಿರ್ಮಿಸಿದ ಒಟ್ಟು 42,346 ಮನೆಗಳನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನವೆಂಬರ್ 29ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಹಂಚಿಕೆ ಮಾಡಲಾಗುವುದು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ -ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ಮಾಣ ಹಂತದ ಮನೆಗಳು ಹಾಗೂ ಕಾರ್ಯಕ್ರಮ ಆಯೋಜಿಸುವ ಹಳೆ ಮಂಟೂರು ರಸ್ತೆಯ ಸ್ಥಳವನ್ನು ಭಾನುವಾರ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾರ್ಯಕ್ರಮ ಆಯೋಜನೆಗೆ ಸ್ಥಳ ಗುರುತಿಸಲಾಗಿದೆ. 17- 18 ಎಕರೆ ಪ್ರದೇಶದಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದ್ದು, 1.5 ಲಕ್ಷ ಆಸನಗಳ ವ್ಯವಸ್ಥೆಗೆ ಜಾಗ ಅನುಕೂಲಕರವಾಗಿದೆ.
ಪ್ರಸ್ತುತ ಒಂದು ಮನೆ ನಿರ್ಮಾಣಕ್ಕೆ 7.50 ಲಕ್ಷ ರೂ. ಬೇಕಾಗುತ್ತದೆ. ಕೇಂದ್ರ ಸರ್ಕಾರ ಪಿಎಂ ಅವಾಸ್ ಯೋಜನೆಯಡಿ 1.50 ಲಕ್ಷ ರೂ. ನೀಡಿ ಶೇಕಡ 18ರಷ್ಟು ಜಿಎಸ್ಟಿ ಹಾಕಿ ಬಡವರಿಂದ 1.38 ಲಕ್ಷ ರೂ. ವಾಪಸ್ ಪಡೆಯುತ್ತಿದೆ. ಇನ್ನು ಮುಂದೆ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸಾಮಾನ್ಯರಿಗೆ 1.50 ಲಕ್ಷ ರೂ., ಪರಿಶಿಷ್ಟ ಜಾತಿ, ಪಂಗಡದವರಿಗೆ 2 ಲಕ್ಷ ರೂ. ನೀಡಲಾಗುವುದು. ಹಾಗೆಯೇ 4 ಲಕ್ಷ ರೂ.ವರೆಗೆ ಫಲಾನುಭವಿಗಳಿಂದ ಪಡೆಯಬೇಕಿತ್ತು. ಬಡವರಿಗೆ ಇದನ್ನು ಭರಿಸುವುದು ಕಷ್ಟ ಸಾಧ್ಯ. ಬಡವರ ಸಲುವಾಗಿ ಫಲಾನುಭವಿಗಳ ವಂತಿಕೆಯನ್ನು ಸಹ ರಾಜ್ಯ ಸರ್ಕಾರವೇ ಭರಿಸುವ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದಾರೆ. 2.30 ಲಕ್ಷ ಮನೆಗಳಿಗೆ 9 ಸಾವಿರ ಕೋಟಿ ರೂ.ಆಗಲಿದ್ದು, ಇದರ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ ಎಂದು ಹೇಳಿದ್ದಾರೆ.