ವಿನಾಶಕಾರಿ ಸುರಂಗ ಮಾರ್ಗಕ್ಕೆ ಲಾಲ್ ಬಾಗ್ ನಲ್ಲಿ 6 ಎಕರೆಯಲ್ಲ, 6 ಇಂಚು ಭೂಮಿಯನ್ನೂ ಬಿಡುವುದಿಲ್ಲ: ತೇಜಸ್ವಿ ಸೂರ್ಯ

ಬೆಂಗಳೂರು: ಆರು ಎಕರೆಗಳ ಮಾತು ಬಿಡಿ, ಈ ವಿನಾಶಕಾರಿ ಸುರಂಗ ರಸ್ತೆ ಯೋಜನೆಗಾಗಿ ಲಾಲ್‌ಬಾಗ್‌ನ ಆರು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಕೂಡ ನಾವು ಬಿಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಸ್ತಾವಿತ ಸುರಂಗಕ್ಕಾಗಿ, ಭೂಸ್ವಾಧೀನ ಪ್ರಸ್ತಾಪಿಸಲಾಗಿರುವ 1.5 ಎಕರೆ ಜಾಗವನ್ನು ಪರಿಶೀಲಿಸಲು ನಾನು ಲಾಲ್‌ಬಾಗ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಂಗ್ರೆಸ್ ಸರ್ಕಾರವು ಈ ಯೋಜನೆಗೆ ಸುಮಾರು ಆರು ಎಕರೆಗಳಷ್ಟು ಈ ಪರಿಸರ-ಪಾರಂಪರಿಕ ಜಾಗವನ್ನು ಕಬಳಿಸಲು ಯೋಜಿಸಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಅತ್ಯಂತ ಪ್ರಸಿದ್ಧ ಹಸಿರು ಶ್ವಾಸಕೋಶದಂತಿರುವ ಲಾಲ್ ಬಾಗ್ ಪ್ರದೇಶಕ್ಕೆ ಶಾಶ್ವತ ನಿರ್ನಾಮ ಮಾಡುವ ಕೃತ್ಯವಾಗಿದೆ. ಇದಕ್ಕಿಂತಲೂ ಹೆಚ್ಚು ಆತಂಕಕಾರಿಯೆಂದರೆ, ಪ್ರಸ್ತಾವಿತ ಸುರಂಗವು 3 ಶತಕೋಟಿ ವರ್ಷಗಳಷ್ಟು ಹಳೆಯದಾದ ಪೆನಿನ್ಸುಲರ್ ಗ್ನೈಸ್ ಬಂಡೆಯ(Peninsular Gneiss rock) ಕೆಳಗೆ ನೇರವಾಗಿ ಹಾದುಹೋಗುತ್ತದೆ, ಇದು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿದ್ದು, ಈ ಪ್ರಾಚೀನ ರಚನೆಯ ಮೂಲಕ ಕೊರೆಯುವುದು ಕೇವಲ ದುಡುಕಿನ ಕ್ರಮವಲ್ಲ. ಇದು ಪರಿಸರ ಮತ್ತು ಭೂವೈಜ್ಞಾನಿಕ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಕ್ರಮವೂ ಹೌದು ಎಂದು ಹೇಳಿದ್ದಾರೆ.

ವಿಸ್ತೃತ ಯೋಜನಾ ವರದಿ(DPR) ಮತ್ತು ಕಾರ್ಯಸಾಧ್ಯತಾ ಅಧ್ಯಯನವು ನಕಲು-ಅಂಟಿಸುವ(copy-paste) ಕೆಲಸದಂತೆ ಕಾಣುತ್ತಿದೆ. ಇದು ಕಳಪೆ, ಅವೈಜ್ಞಾನಿಕ ಮತ್ತು ವಿಶ್ವಾಸಾರ್ಹತೆ ಇಲ್ಲದ್ದಾಗಿದ್ದು, ಯಾವುದೇ ಪರಿಸರ ಪರಿಣಾಮದ ಮೌಲ್ಯಮಾಪನ (EIA) ನಡೆಸಲಾಗಿಲ್ಲ. ಬದಲಿಗೆ, ನಿಜವಾದ ಕಳವಳಗಳನ್ನು ತಳ್ಳಿಹಾಕಲು ಅಸ್ಪಷ್ಟ ಸೈದ್ಧಾಂತಿಕ ನೆಪಗಳನ್ನು ಬಳಸಲಾಗುತ್ತಿರುವುದು ವಿಷಾದಕರ ಎಂದಿದ್ದಾರೆ.

ಇದಕ್ಕಿಂತ ಕೆಟ್ಟ ವಿಷಯವೆಂದರೆ, DPR ವರದಿಯಲ್ಲಿ ಸುರಂಗ ಇರುವ ಸ್ಥಳದಲ್ಲಿ ಲಾಲ್‌ಬಾಗ್‌ನೊಳಗೆ ವಾಣಿಜ್ಯ ಸಂಕೀರ್ಣವನ್ನು ಪ್ರಸ್ತಾಪಿಸಿದೆ. ಬೆಂಗಳೂರಿನ ಅತ್ಯಂತ ಹಳೆಯ ಸಸ್ಯೋದ್ಯಾನದೊಳಗೆ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಶುದ್ಧ ಹುಚ್ಚುತನ. ಇದು ನಗರದ ಪರಂಪರೆ ಮತ್ತು ಸಾಮಾನ್ಯ ಜ್ಞಾನಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ನಾನು ಭೇಟಿಯಾದ ನಾಗರಿಕರು – ಬೆಳಗಿನ ವಾಕಿಂಗ್ ಮಾಡುವವರು, ಪರಿಸರವಾದಿಗಳು ಮತ್ತು ನಿವಾಸಿಗಳು – ಯಾವುದೇ ಸಾರ್ವಜನಿಕ ಸಮಾಲೋಚನೆಯನ್ನು ನಡೆಸದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಮ್ಮೆ, ಶೂನ್ಯ ಪಾರದರ್ಶಕತೆ ಅಥವಾ ಹೊಣೆಗಾರಿಕೆಯೊಂದಿಗೆ ಮುಚ್ಚಿದ ಬಾಗಿಲುಗಳ ಹಿಂದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿರುವುದುರ ಕುರಿತು ಅಸಹನೆ ವ್ಯಕ್ತಪಡಿಸಿರುತ್ತಾರೆ.

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ದುರಂತದ ನಂತರ, ಯಾವುದೇ ಜವಾಬ್ದಾರಿಯುತ ಸರ್ಕಾರ ಮಾಡಬೇಕಾದ ಕನಿಷ್ಠ ಕೆಲಸವೆಂದರೆ ಸಮಗ್ರ ಸುರಕ್ಷತಾ ಪರಿಶೀಲನೆಯನ್ನು ನಡೆಸುವುದು. ಆದರೆ, ಸುರಂಗದ ಜೋಡಣೆ ಮತ್ತು ಭೂವೈಜ್ಞಾನಿಕ ದತ್ತಾಂಶವನ್ನು ತೋರಿಸಲು ಕೇಳಿದಾಗ, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ಅಧಿಕಾರಿಗಳು ಸಾರ್ವಜನಿಕ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗದೆ ಅಕ್ಷರಶಃ ಸ್ಥಳದಿಂದ ಪಲಾಯನ ಮಾಡಿದ್ದು ದುರದೃಷ್ಟಕರ ಸಂಗತಿ.

ಈ ಸುರಂಗದ ಲಾಲ್‌ಬಾಗ್‌ನ ಭೂವಿಜ್ಞಾನ ಮತ್ತು ಭೂಕಂಪನ ಶಾಸ್ತ್ರದ ಮೇಲಿನ ಸಂಭಾವ್ಯ ಪರಿಣಾಮಗಳ ಕುರಿತು ಸ್ವತಂತ್ರ ಅಧ್ಯಯನವನ್ನು ನಡೆಸಿ ವರದಿಯನ್ನು ಸಲ್ಲಿಸುವಂತೆ ನಾನು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ (GSI) ನಿರ್ದೇಶನ ನೀಡಿದ್ದೇನೆ.

ಈ ಸುರಂಗ ರಸ್ತೆ ಯೋಜನೆಯು ಅವೈಜ್ಞಾನಿಕ, ಅನಗತ್ಯ ಮತ್ತು ಅಸುರಕ್ಷಿತವಾಗಿದೆ. ಬೆಂಗಳೂರಿನ ಭವಿಷ್ಯವು ಅದರ ಹಸಿರು ಜಾಗಗಳ ಕೆಳಗೆ ದುಡುಕಿನ ಸುರಂಗ ಕೊರೆಯುವುದರಲ್ಲಿಲ್ಲ, ಬದಲಿಗೆ ಮೆಟ್ರೋ, ಉಪನಗರ ರೈಲು ಮತ್ತು ಸಾರ್ವಜನಿಕ ಸಾರಿಗೆ ಏಕೀಕರಣ – ಸಾಮೂಹಿಕ ಕ್ಷಿಪ್ರ ಸಾರಿಗೆ ವಿಸ್ತರಣೆಯಲ್ಲಿದೆ.

ಇಂದು ಸ್ಪಷ್ಟವಾದ ಸಂಗತಿಯೆಂದರೆ, ಬೆಂಗಳೂರು ನಾಗರಿಕರು ಒಂದಾಗಿ, ಇಂತಹ ಅವೈಜ್ಞಾನಿಕ ನಿರ್ಧಾರಗಳ ವಿರುದ್ಧ ಹೋರಾಡಬೇಕಿದೆ.

ನಮ್ಮ ಆಕ್ರೋಶ ಕೇವಲ ಕೆಲವು ಮರಗಳನ್ನು ಉಳಿಸುವುದರ ಬಗ್ಗೆ ಅಲ್ಲ.  ನಗರದ ಕೊನೆಯ, ಉಳಿದಿರುವ ಹಸಿರು ಶ್ವಾಸಕೋಶಗಳು, ಅದರ ಪರಿಸರ ಪರಂಪರೆ ಮತ್ತು ಭವಿಷ್ಯದ ಪೀಳಿಗೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read