ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ ಹೈಡ್ರಾಮ ಹಾಗೂ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಶಾಸಕರ ಮೇಲೆ ಹಲ್ಲೆಗೆ ಯತ್ನ ಖಂಡನೀಯ. ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಪಾಳೆಗಾರಿಕೆ ಸಂಸ್ಕೃತಿಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅಧಿಕಾರ ಶಾಶ್ವತ ಎನ್ನುವ ಭಾವನೆಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಕೂಡ ಎರಡುವರೆ ವರ್ಷದಿಂದ ಬೆಂಗಳೂರಿನಲ್ಲಿ ಒಂದು ಗುಂಡಿ ಮುಚ್ಚಲು ಇವರಿಂದ ಸಾಧ್ಯವಾಗಿಲ್ಲ. ಈಗ ಗ್ರೇಟರ್ ಬೆಂಗಳೂರು ಆಥಾರಿಟಿ ಎಂಬ ಹೊಸ ಡ್ರಾಮಾ ಶುರು ಮಾಡುತ್ತಿದ್ದಾರೆ. ಇದರಿಂದ ಯಾರಿಗೆ ಏನು ಪ್ರಯೋಜನ? ಈಗ ಶಾಸಕರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಓರ್ವ ಜನಪ್ರತಿನಿಧಿಗೆ ಗೌರವ ಕೊಡದಿರುವುದು ಸರಿಯಲ್ಲ. ಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ ಎಂದರು.