ಶಿವಮೊಗ್ಗ: ಬಹು ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಅರಣ್ಯ ಭಾಗದ ರೈತರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡುವುದು, ತೊಂದರೆ ಕೊಟ್ಟು ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬಾರದು. ಹಾಗೂ ರೈತರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ವಯ ನಡೆದುಕೊಳ್ಳಬೇಕೆಂದು ಸಂಬಂಧಿಸಿದ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಹೊಸದಾಗಿ ಒತ್ತುವರಿಗೆ ಅವಕಾಶ ಮಾಡಬಾರದು. ಹಾಗೂ 27-04-1978 ರ ಪೂರ್ವದ ಅರಣ್ಯ ಒತ್ತುವರಿವನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ ಅವರು ಸರ್ಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಮಂಜೂರು ಮಾಡಲಾದ ರೈತರ ಸಾಗುವಳಿ/ವಸತಿ ಭೂಮಿಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವ ಸಂಬಂಧ ಕೈಗೊಂಡ ಕ್ರಮದ ಕುರಿತು ವರದಿಯನ್ನು ನೀಡಬೇಕೆಂದು ತಿಳಿಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡಿನ ಭಾಗದಲ್ಲಿ ರೈತನ್ನು ಒಕ್ಕಲೆಬ್ಬಿಸುವ ಸಂಬಂಧ ನೋಟಿಸ್ ನೀಡಲಾಗುತ್ತಿದೆ. ಕೆಲವೆಡೆ ತೊಂದರೆ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು.
ಸಿಸಿಎಫ್ ಹನುಮಂತಪ್ಪ ಮಾತನಾಡಿ, ಪಿಎಫ್ ಮತ್ತು ಎಂಎಫ್ ಪ್ರಕರಣಗಳು ಕಿರು ಅರಣ್ಯ ವ್ಯಾಪ್ತಿಗೆ ಬರುತ್ತವೆ. ಇವುಗಳನ್ನು ಸೆಟ್ಲ್ ಮಾಡಬಹುದು, ಈ ಸಂಬಂಧ 375 ಅಧಿಸೂಚನೆಗಳಿವೆ ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಹೇಮಂತ್ ಎನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಅರಣ್ಯ, ನೀರಾವರಿ, ಕಂದಾಯ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.