ಮೈಸೂರು: ಮೈಸೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಬ್ಯಾಕ್ ಟು ಬ್ಯಾಕ್ ಕೊಲೆ ಪ್ರಕರಣಗಳು ನಡೆಯುತ್ತಿವೆ. ಈಗ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಇಷ್ಟಾದರೂ ಸರ್ಕಾರದ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ ಯಾಕೆ? ಸರ್ಕಾರದ ಕೂಗುಮಾರಿಗಳು ಈಗ ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ಕೆಲ ಕೂಗುಮಾರಿಗಳಿದ್ದಾರೆ. ಉಕ್ರೇನ್, ರಷ್ಯಾದ ಬಗ್ಗೆ ಕಮೆಂಟ್ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಮೈಸೂರಿನಲ್ಲಿ ನಡೆದ ಬಾಲಕಿ ಕೊಲೆ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ ಯಾಕೆ? ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಚಿಕ್ಕಬಳ್ಳಾಪುರದ ಕೂಗುಮಾರಿ ಇವರಲ್ಲಿ ಒಬ್ಬರಾದರೂ ಬಾಯಿ ತೆರೆಯುತ್ತಿದ್ದಾರಾ? ಸಿಎಂ, ಡಿಸಿಎಂ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಏನಾಗುತ್ತಿದೆ? ಪದೇ ಪದೇ ಕೊಲೆ ಪ್ರಕರಣಗಳು ನಡೆಯುತ್ತಿವೆ. ಸಿದ್ದರಾಮಯ್ಯನವರೇ ಯಾವ ಪುರುಷಾರ್ಥಕ್ಕೆ ನೀವು ಸಿಎಂ ಆಗಿದ್ದೀರಾ? ರಾಜ್ಯದ ಪೊಲೀಸರಿಗೆ ಧಕ್ಷತೆ ಇದೆ. ಆದರೆ ಕೆಲಸ ಮಾಡಲು ಮುಕ್ತ ವಾತಾವರಣವಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯನವರು ನಳಪಾಕ್ ನಲ್ಲಿ ಕಾಫಿ ಕುಡಿಯಲು, ಮೈಲಾರಿ ದೋಸೆ ತಿನ್ನಲು ಅಷ್ಟೇ ಪೊಲ್ಲೀಸರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸಚಿವ ಮಹದೇವಪ್ಪ ಬರೀ ಸಂವಿಧಾನದ ಪೀಠಿಕೆ ಓದಿಸೋದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಈಗ ಬಾಲಕಿಯ ಕೊಲೆಯಾಗಿದ್ದರೂ ಯಾರೊಬ್ಬರು ಈ ಬಗ್ಗೆ ಮಾತನಾಡುತ್ತಿಲ್ಲ. ಧ್ವನಿ ಎತ್ತುತ್ತಿಲ್ಲ. ಸಿಎಂ ಸಿಇದ್ದರಾಮಯ್ಯನವರ ಹೃದಯವೇ ಕಲ್ಲಾಗಿದೆ ಎಂದು ಕಿಡಿಕಾರಿದ್ದಾರೆ.