ಶಿವಮೊಗ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಪುಟ ವಿಸ್ತರಣೆ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಭಯ ಹುಟ್ಟಿಸುತ್ತಿದ್ದಾರೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬೆಂಬಲಿಗರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆಗಾಗ ಸಂಪುಟ ವಿಸ್ತರಣೆ ಎಂದು ಹೇಳಿ ಆತಂಕದಲ್ಲೇ ಇರುವಂತೆ ಮಾಡುತ್ತಿದ್ದಾರೆ ಎಂದರು.
ಈ ಮೂಲಕ ಡಿಕೆಶಿ ಬೆಂಬಲಿಗರಿಗೆ ನಿಮ್ಮನ್ನು ಸಂಪುಟದಿಂದ ತೆಗೆಯುತ್ತೇವೆ. ನಮ್ಮಜೊತೆ ಇರಬೇಕಾದರೆ ಹುಷಾರಾಗಿರುವಂತೆ ಪರೋಕ್ಷವಾಗಿ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಬರಿ ಬಸವತತ್ವದಲ್ಲಿ ನಂಬಿಕೆ ಎಂದು ಹೇಳುತ್ತಾರಷ್ಟೇ ಆದರೆ ಸಿದ್ದರಾಮಯ್ಯನವರ ಎದೆ ಬಗೆದರೆ ಬಸವೇಶ್ವರರು ಕಾಣಲ್ಲ. ಕಾಣುವುದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ. ತಮ್ಮ ಕುರ್ಚಿ ಗಟ್ಟಿಗೊಳಿಸಿಕೊಳ್ಳಲು ಸಿದ್ದರಾಮಯ್ಯ ಸೋನಿಯಾ, ರಾಹುಲ್ ಅವರ ಫೋಟೋವನ್ನೇ ಹಾಕಿಕೊಂಡಿರ್ತಾರೆ. ಅವರೇ ಇವರ ಸಿಎಂ ಸ್ಥಾನ ಭದ್ರಗೊಳಿಸೋದು ಎಂದು ವಾಗ್ದಾಳಿ ನಡೆಸಿದ್ದಾರೆ.