ಚೆನ್ನೈ: ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ ಕೆಲವೇ ದಿನಗಳ ನಂತರ ಗುರುವಾರ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಚೆನ್ನೈ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಟಿವಿಕೆ ರ್ಯಾಲಿಯಲ್ಲಿ 41 ಜನ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ದುರಂತ ಘಟನೆಯ ನಂತರ ವಿಜಯ್ ಅವರ ವಿರುದ್ಧ ಹೆಚ್ಚುತ್ತಿರುವ ಟೀಕೆಗಳ ಮಧ್ಯೆ ಈ ಬೆದರಿಕೆ ಬಂದಿದೆ.
ಮುನ್ನೆಚ್ಚರಿಕೆಯಾಗಿ ನೀಲಂಕರೈನಲ್ಲಿರುವ ವಿಜಯ್ ಅವರ ನಿವಾಸದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಾಂಬ್ ಸ್ಕ್ವಾಡ್ ನಿಂದ ಸಂಪೂರ್ಣ ಹುಡುಕಾಟದ ನಂತರ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ ಮತ್ತು ಬೆದರಿಕೆ ಸುಳ್ಳು ಎಚ್ಚರಿಕೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ವಂಚನೆ ಕರೆಯ ಮೂಲವನ್ನು ಪತ್ತೆಹಚ್ಚಲು ಮತ್ತು ಅದರ ಹಿಂದಿನವರನ್ನು ಗುರುತಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ.