ಬೆಂಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಕೀಲ ಭಕ್ತವತ್ಸಲ ಅವರು ನೀಡಿದ ದೂರಿನ ಅನ್ವಯ ಕ್ರಿಮಿನಲ್ ದುರುದ್ದೇಶದಿಂದ ಸರ್ಕಾರಿ ಕರ್ತವ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ರಾಕೇಶ್ ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯು ದೆಹಲಿಯಲ್ಲಿ ನಡೆದಿರುವುದರಿಂದ ಪ್ರಕರಣದ ತನಿಖೆಯನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅ. 6ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆಯ ಸಂದರ್ಭದಲ್ಲಿ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದರು. ಅವರ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರತಿಭಟನೆ ಕೂಡ ನಡೆಸಲಾಗಿದ್ದು, ವಕೀಲನ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.