ಬೆಂಗಳೂರು: ನರೇಗಾ ಯೋಜನೆಯಡಿ ಜಲ ಸಂಚಯ ಜನ ಭಾಗೀದಾರಿ ಅಭಿಯಾನದಡಿ ಜಲ ಸಂರಕ್ಷಣೆಯಲ್ಲಿ ತೊಡಗಿರುವ ರಾಜ್ಯದ 7 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಪ್ರತಿ ಹನಿ ನೀರನ್ನು ಸಂರಕ್ಷಿಸುವ ಹಾಗೂ ಅಂತರ್ಜಲ ಮರುಪೂರಣದ ಧ್ಯೇಯದೊಂದಿಗೆ ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ರಾಜ್ಯದ 7 ಜಿಲ್ಲೆಗಳಿಗೆ “ಜಲ ಸಂಚಯ ಜನ ಭಾಗಿದಾರಿ” ಅಭಿಯಾನದಡಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಜಿಲ್ಲಾ ಪಂಚಾಯತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಅಭಿಯಾನದ ಮುಖ್ಯ ಉದ್ದೇಶ ಅಂತರ್ಜಲವನ್ನು ಹೆಚ್ಚಿಸುವುದು, ಮಳೆ ನೀರನ್ನು ಸಂರಕ್ಷಿಸುವುದು, ಜಲಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ಕೊಳವೆಬಾವಿ, ಸಮಗ್ರ ಕೆರೆ-ಕಟ್ಟೆ ಅಭಿವೃದ್ಧಿ, ಕಲ್ಯಾಣಿ ಜೀರ್ಣೋದ್ಧಾರ, ಚೆಕ್ ಡ್ಯಾಮ್ ನಿರ್ಮಾಣ ಸೇರಿದಂತೆ ಜಲಸಂರಕ್ಷಣೆಯ ಎಲ್ಲ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದಾಗಿದೆ.
ನರೇಗಾ ಯೋಜನೆಯ ಸಹಾಯದಿಂದ ಜಲಸಂರಕ್ಷಣೆಗಾಗಿ, ಗದಗ ಜಿಲ್ಲೆಯಲ್ಲಿ – 11,971 ವಿಜಯಪುರ – 11,453 , ಬೀದರ್ -10,297, ಕೋಲಾರ – 8,470 ತುಮಕೂರು – 9,885, ಮಂಡ್ಯ – 7,192, ಚಿತ್ರದುರ್ಗ – 7,815 ಕಾಮಗಾರಿಗಳನ್ನು ನಡೆಸಲಾಗಿದೆ. ಇದು ಇತರೆ ಜಿಲ್ಲೆಗಳಿಗೂ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.