ಬೆಂಗಳೂರು: ಜಲ ಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಮೇಲೆ ‘ಬಿಗ್ ಬಾಸ್’ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಪಾರ್ಕ್ ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಹಾಕಿದೆ.
ನಟ ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಗೆ ತಾತ್ಕಾಲಿಕ ತೆರೆ ಬಿದ್ದಿದೆ. ನಿನ್ನೆ ಸಂಜೆಯಿಂದ ‘ಬಿಗ್ ಬಾಸ್’ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. 2021 ರಲ್ಲಿ ಕೋವಿಡ್ ಎರಡನೇ ಅಲೆಯ ಭೀಕರತೆ ಮತ್ತು ಲಾಕ್ ಡೌನ್ ಹೇರಿಕೆಯಿಂದಾಗಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಸೀಸನ್ 8 ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.
ಈಗ ಕೇವಲ ಎರಡೇ ವಾರಕ್ಕೆ ಸೀಸನ್ 12 ಮುಕ್ತಾಯವಾಗಲಿದೆ. ಮನೆಗೆ ಬೀಗ ಹಾಕಿದ ಕಾರಣ ‘ಬಿಗ್ ಬಾಸ್’ ಸ್ಪರ್ಧಿಗಳನ್ನು ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಗಿದೆ. ಇಂದು ಆಯೋಜಕರು ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಕೋರ್ಟ್ ಆದೇಶದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.