ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕ ಸಮೀಕ್ಷೆ ಹಿನ್ನೆಲೆಯಲ್ಲಿ ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಣೆ ಮಾಡಲಾಗಿದೆ. ಶಿಕ್ಷಕರು ಹಾಗೂ ಸಿಬ್ಬಂದಿಗಳು 12 ದಿನಗಳಲ್ಲಿ ಸಮೀಕ್ಷೆ ಕಾರ್ಯ ಮುಗಿಸಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ನಾಯ್ಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧುಸೂಧನ್ ನಾಯ್ಕ್, ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಜನರು ಉತ್ತರಿಸಬೇಕು ಎಂದಿಲ್ಲ. 60 ಪ್ರಶ್ನೆಗಳಿವೆ. 60 ಪ್ರಶ್ನೆಗಳಿಗೂ ಉತ್ತರಿಸುವ ಅಗತ್ಯವಿಲ್ಲ. ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರೆ ಸಾಕು. ನಾನು ಕೂಡ 35 ಪ್ರಶ್ನೆಗಳಿಗಷ್ಟೇ ಉತ್ತರ ನೀಡಿದ್ದೇನೆ. ಸಮೀಕ್ಷೆದಾರರು ಕೂಡ ವೈಯಕ್ತಿಕವಾಗಿ ಪ್ರಶ್ನೆಗಳನ್ನು ಕೇಳುವಂತಿಲ್ಲ ಎಂದು ಹೇಳಿದರು.
ಸಮೀಕ್ಷೆಯಿಂದ ಯಾವುದೇ ಮಾಹಿತಿಗಳು ಬಹಿರಂಗವಾಗುವುದುಲ್ಲ. ನಾಯಕರುಗಳು ಯಾಕೆ ಹೀಗೆ ಮಿಸ್ ಲೀಡ್ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಬಾರದು ಎಂದು ಕೋರ್ಟ್ ಆದೇಶವಿದೆ. ಈ ಸಮೀಕ್ಷೆ ಕೇವಲ ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗಗಳಿಗೂ ಅನ್ವಯವಾಗುತ್ತದೆ. ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ. ಇಲ್ಲವಾದಲ್ಲಿ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದರು.
ಸಮೀಕ್ಷೆ ನಡೆಸುವವರು ಒಂದು ದಿನಕ್ಕೆ 10 ಮನೆಗಳ ಸಮೀಕ್ಷೆ ನಡೆಸಬೇಕು. 12 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಹೇಳಿದರು.