ನವದೆಹಲಿ: ಕಳ್ಳನೆಂದು ತಪ್ಪಾಗಿ ಭಾವಿಸಿ ವ್ಯಕ್ತಿಯೋರ್ವನನ್ನು ಭದ್ರತಾ ಸಿಬ್ಬಂದಿಗಳು ಹಿಡಿದು ಥಳಿಸಿ ಹತ್ಯೆಗೈದಿರುವ ಘಟನೆ ತಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ನಡೆದಿದೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆದರೆ 40 ವರ್ಷವಯಸ್ಸಿನ ವ್ಯಕ್ತಿ ಎಂದು ಹೇಳಲಾಗಿದೆ. ಈ ಬಗ್ಗೆ ಎಸ್ ಒಪಿ ರಾಜೇಸ್ಜ್ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದು, ತಡರಾತ್ರಿ ಕಾಲೋನಿಯಲ್ಲಿ ಮೂವರು ವ್ಯಕ್ತಿಗಳು ಓಡಾಡುತ್ತಿದ್ದರು. ಭದ್ರತಾ ಸಿಬ್ಬಂದಿಗಳು ಅವರತ್ತ ಧಾವಿಸುತ್ತಿದ್ದಂತೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೋರ್ವನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ವ್ಯಕ್ತಿಯ ಕೈ-ಕಾಲುಗಳನ್ನು ಕಟ್ಟಿಹಾಕಿದ್ದಾರೆ. ವ್ಯಕ್ತಿ ಕಳ್ಳನೆಂದು ಭಾವಿಸಿ ಹಿಡಿಯಲಾಗಿತ್ತು. ಇದರ ಬೆನ್ನಲ್ಲೇ ವ್ಯಕ್ತಿಯ ಆರೋಗ್ಯ ಕ್ಷೀಣಿಸಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ.
ಮೃತ ವ್ಯಕ್ತಿಯ ಮೊಣಕೈ ಮೇಲೆ ಉದಯ್ ವಾಲಿ ಎಂದು ಬರೆದಿದೆ. ವ್ಯಕ್ತಿ ಸಾವುವ ಮುನ್ನ ಆತನನ್ನು ಥಳಿಸಲಾಗಿದೆ ಎಂಬುದಕ್ಕೆ ಆತನ ಮೈಮೇಲಿರುವ ಗಾಯಗಳ ಗುರುತು ಪತ್ತೆಯಾಗಿದೆ.ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.