ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರ ಬೆಸ್ಕಾಂ ಉಪ ವಿಭಾಗದಲ್ಲಿ ಭಾರಿ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 3.85 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ಇಷ್ಟು ಮೌಲ್ಯದ ವಿವಿಧ ಸಾಮಗ್ರಿಗಳನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಬಯಲಾಗಿದೆ.
ಬೆಸ್ಕಾಂ ಉಪ ವಿಭಾಗದ ಇಇ ರವಿಕಿರಣ್ ಅವರು ದೂರು ನೀಡಿದ್ದು, ಹರಿಹರದ ಬೆಸ್ಕಾಂ ಸಹಾಯಕ ಉಗ್ರಾಣ ಪಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರುದಾರ ರವಿಕಿರಣ್ ಅವರಿಂದ ಮಾಹಿತಿ ಪಡೆದ ಪೊಲೀಸರು ಕೇಸ್ ದಾಖಲಿಸಿ ಬೆಸ್ಕಾಂ ಹರಿಹರ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಗ್ರಾಣದಿಂದ 72.58 ಲಕ್ಷ ಮೌಲ್ಯದ ಟಿಸಿಗಳು ಮಾಯವಾಗಿವೆ. ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬ, ವೈರ್, ಲೈನ್ ಸಾಮಗ್ರಿ, ಪಿವಿಸಿ ಅಲ್ಯೂಮಿನಿಯಂ ರೀಡ್ ವೈರ್ ದುರ್ಬಳಕೆ ಮಾಡಿಕೊಂಡಿದ್ದು, 89,270 ಲೀಟರ್ ಟಿಸಿ ಆಯಿಲ್ ಲೆಕ್ಕವನ್ನು ಅಧಿಕಾರಿಗಳು ನೀಡಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.