ಸಮೀಕ್ಷೆಗೆ ಗಣತಿದಾರರು ಬಂದಾಗ ಮಾಹಿತಿ ನೀಡಿ, ಇಲ್ಲವೇ ನೀವೇ ಮಾಹಿತಿ ದಾಖಲು ಮಾಡಲು ಇಲ್ಲಿದೆ ವಿವರ

ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಲು ಈಗಾಗಲೇ ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಈ ಸಮೀಕ್ಷೆಯು ಅಕ್ಟೋಬರ್‌ 7ರ ವರೆಗೆ ನಡೆಯಲಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಇಂದಿನಿಂದ ಆರಂಭವಾಗಿದೆ.

ಜಿಬಿಎ ವ್ಯಾಪ್ತಿಯ ಎಲ್ಲಾ ನಾಗರಿಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಮೀಕ್ಷಾದಾರರಿಗೆ ಸಹಕರಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.

ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಕೂಡ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯವನ್ನು ಸಿದ್ಧಪಡಿಸಲಾಗಿದೆ.

ಸಾರ್ವಜನಿಕರು https://kscbcselfdeclaration.karnataka.gov.in ನಲ್ಲಿ ಸ್ವಯಂ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ  ಪುಟದಲ್ಲಿ ʼನಾಗರಿಕʼ ಎಂಬುದನ್ನು ಆಯ್ಕೆ ಮಾಡಿದ್ದಲ್ಲಿ ಲಾಗಿನ್‌ನಲ್ಲಿ ಮುಂದುವರೆಯಲು ಕೋರಲಾಗುತ್ತದೆ. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿದ್ದಲ್ಲಿ, ಒಟಿಪಿ ಬರಲಿದ್ದು, ಅದನ್ನು ದಾಖಲು ಮಾಡಬೇಕಾಗುತ್ತದೆ.

ನಂತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೆಯ ಸ್ಥಿತಿಗತಿ ಕುರಿತಂತೆ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಲಿದ್ದು, ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಬೇಕಾಗುತ್ತದೆ.

ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕ್ಕರ್‌ನಲ್ಲಿರುವ UHID ಸಂಖ್ಯೆಯನ್ನು ದಾಖಲಿಸಿ ಸ್ಕ್ರೀನ್‌ನಲ್ಲಿ ಕೋರುವ ಮಾಹಿತಿಗಳನ್ನು ದಾಖಲು ಮಾಡಬೇಕಾಗುತ್ತದೆ.

ಸದರಿ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್,ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದರೆ UID Card ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದಾಗಿದ್ದು, ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್‌ಗೆ ಸಂದೇಶ ಬರಲಿದೆ.

ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದ್ದು, ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ಯಾವುದೇ ಗೊಂದಲಗಳಿಲ್ಲದೆ ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆಯಲ್ಲಿ ತಿಳಿಸಲು ಸಾಧ್ಯವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read