ಮೈಸೂರು: ದಸರಾ ಮಹೋತ್ಸವದ ವೇಳೆ ಪರೇಡ್ ನಲ್ಲಿ ಸಚಿವ ಮಹದೇವಪ್ಪ ತಮ್ಮ ಮೊಮ್ಮಗನನ್ನು ಕರೆದೊಯ್ಯುವ ಮೂಲಕ ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ದಸರಾ ಪರೇಡ್ ನಲ್ಲಿ ತೆರೆದ ವಾಹನದಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವರೊಂದಿಗೆ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಮೊಮ್ಮಗ ಕಾಣಿಸಿಕೊಂಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಹದೇವಪ್ಪ, ಯಾವುದೇ ಪ್ರೋಟೋಕಾಲ್ ಉಲ್ಲಂಘನೆಯಾಗಿಲ್ಲ. ಮುಖ್ಯಮಂತ್ರಿಗಳು ದಸರಾ ಉದ್ಘಾಟಕರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವುದು ಸರ್ಕಾರಿ ಕಾರ್ಯಕ್ರಮ. ಅದಾದ ನಂತರ ದಸರಾದ 11ನೇ ದಿನ ಆಚರಣೆಯ ಪರೇಡ್ ಆಗಿರಲಿಲ್ಲ. ಅಲ್ಲಿ ಯಾವ ಧ್ವಜವಂದನೆಯೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರೋಟೋಕಾಲ್ ಇರಲಿಲ್ಲ. ಸೆಲ್ಯೂಟ್ ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಜನರಿಗೆ ಕೈ ಬಿಸಿ ಕೃತಜ್ಞತೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋಗಿದ್ದೆವು. ದಸರಾ ಆಚರಣೆ ಬಗ್ಗೆ ಅರಿವಿಲ್ಲದವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ಯಾವುದೇ ಶಿಸ್ತು ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.