ಬೆಂಗಳೂರು: ಪ್ರಿಯಕರ ಬೇರೊಂದು ಮಹಿಳೆಯೊಂದಿಗೆ ಲಾಡ್ಜ್ ರೂಮ್ ನಲ್ಲಿರುವುದನ್ನು ಕಂಡು ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಶೋಧಾ(38) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಸಾವಿಗೂ ಮುನ್ನ ಮಹಿಳೆ ಯಶೋಧ ತನ್ನ ಪ್ರಿಯಕರ ವಿಶ್ವನಾಥ್, ಬೇರೊಂದು ಮಹಿಳೆಯೊಂದಿಗೆ ಓಯೋ ಲಾಡ್ಜ್ ರೂಂ ನಲ್ಲಿರುವ ಬಗ್ಗೆ ತಿಳಿದು ರೂಂ ಮೇಲೆ ದಾಳಿ ನಡೆಸಿದ್ದರು. ಗಲಾಟೆ ಮಾಡಿ ವಿಶ್ವನಾಥ್ ನನ್ನು ಪ್ರಶ್ನಿಸಿದ್ದರು. ಆದರೆ ವಿಶ್ವನಾಥ್ ಸರಿಯಾಗಿ ಮಾತನಾಡಿಲ್ಲ. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಯಶೋಧಾ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ವಿಶ್ವನಾಥ್ ಎಂಬಾತನ ಜೊತೆ ಅಕ್ರಮ ಸಂಬಂಧಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ.
ಕಳೆದ 8 ವರ್ಷಗಳಿಂದ ಯಶೋಧ ಹಾಗೂ ವಿಶ್ವನಾಥ್ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯಶೋಧಾ, ತನ್ನ ಸ್ನೇಹಿತೆಗೆ ವಿಶ್ವನಾಥ್ ನನ್ನು ಪರಿಚಯಿಸಿದ್ದರು. ಹೀಗೆ ಪರಿಚಯಿಸಿದ್ದೇ ತಡ ವಿಶ್ವನಾಥ್, ಯಶೋಧಾ ಸ್ನೇಹಿತೆಯ ಜೊತೆಯೇ ಸುತ್ತಾಡಲು ಆರಂಭಿಸಿದ್ದು, ಸ್ನೇಹಿತೆ ವಿಶ್ವನಾಥ್ ನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ.
ವಿಷಯ ಯೋಧಾಳಿಗೆ ಗೊತ್ತಾಗಿ ಬೇಸರಗೊಂಡಿದ್ದರು. ವಿಶ್ವನಾಥ್, ತನ್ನ ಸ್ನೇಹಿತೆ ಜೊತೆ ಲಾಡ್ಜ್ ರೂಂ ನಲ್ಲಿದ್ದಾನೆ ಎಂಬುದು ಗೊತ್ತಾಗುತ್ತಿದ್ದಂತೆ ರೂಮಿನ ಮೇಲೆ ಯಶೋಧ ದಾಳಿ ನಡೆಸಿ, ಗಲಾಟೆ ಮಾಡಿದ್ದಾಳೆ. ಪ್ರಿಯಕರ ಸರಿಯಾಗಿ ಸ್ಪಂದಿಸದಿದ್ದಾಗ ಓಯೋ ರೂಂ ನಲ್ಲಿ ವಿಶ್ವನಾಥ್ ಇದ್ದ ಪಕ್ಕದ ರೂಮಿನಲ್ಲಿಯೇ ಬಾಡಿಗೆ ಪಡೆದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾಗಡಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.