ರೈತರೇ ಗಮನಿಸಿ :  ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನೋಂದಣಿ ಪ್ರಾರಂಭ

ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಅಕ್ಟೋಬರ್ 1ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಗದೀಶ.ಜಿ ನಿರ್ದೇಶನ ನೀಡಿದರು.

ಇಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಮಾಡುವ ಸಂಬಂಧ ಕರೆಯಲಾಗಿದ್ದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ಕ್ವಿಂಟಲ್ ರಾಗಿಗೆ 4,886 ರೂ.ಗಳ ಬೆಂಬಲ ಬೆಲೆಯನ್ನು ಸರ್ಕಾರ ನಿಗಧಿಪಡಿಸಿದ್ದು, 2025ರ ಅಕ್ಟೋಬರ್ 01 ರಿಂದ ಡಿಸೆಂಬರ್ 15 2025 ರ ವರೆಗೆ ನೊಂದಣಿ ಕಾರ್ಯ ಕೈಗೊಳ್ಳಲಾಗುವುದು ಹಾಗೂ ಜನವರಿ 01 2026 ರಿಂದ ಮಾರ್ಚ್ 31 2026 ರವರೆಗೆ ರಾಗಿ ಖರೀದಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರಂ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ, ಯಲಹಂಕ ಹಾಗೂ ಆನೇಕಲ್ ತಾಲ್ಲೂಕಿನಲ್ಲಿ ರಾಗಿ ಖರೀದಿ ಕೇಂದ್ರವನ್ನು ಮತ್ತು ರಾಗಿ ನೊಂದಣಿ ಕೇಂದ್ರವನ್ನು ತೆರೆಯಲು ಅನುಮತಿಯನ್ನು ನೀಡಲಾಗಿದ್ದು, ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ಮುಗಿಯುವವರೆಗೂ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶಾಮಿಯಾನ ಮತ್ತ ಚೇರ್ ಹಾಗೂ ಟೇಬಲ್ ಗಳ ವ್ಯವಸ್ಥೆಯನ್ನು ಮಾಡುವಂತೆ ಎ.ಪಿ.ಎಂ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಯಲಹಂಕ, ಕೆ.ಆರ್.ಪುರಂ, ಕೆಂಗೇರಿ ಮತ್ತು ಆನೇಕಲ್ ಖರೀದಿ ಕೇಂದ್ರಗಳಿಗೆ ನೋಡಲ್ ಏಜೆನ್ಸಿಯಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಕೇಂದ್ರ ಸರ್ಕಾರವು ನಿಗಧಿಪಡಿಸಿರುವ ಮಾನದಂಡಗಳನ್ವಯ ರಾಗಿ ಖರೀದಿ ಹಂತದಲ್ಲಿ ಎಫ್.ಎ ಕ್ಯೂ ಗುಣಮಟ್ಟವನ್ನು ದೃಢೀಕರಿಸಿ ಪ್ರತಿ ಕೇಂದ್ರದಲ್ಲಿ ಮೂರನೇ ವ್ಯಕ್ತಿ ಗುಣಮಟ್ಟವನ್ನು ಪರರೀಕ್ಷಕರನ್ನು ನೇಮಿಸಲು ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಾಗಿ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಬಯೋಮೆಟ್ರಿಕ್ ಆಧಾರದಲ್ಲಿಯೇ ಕೈಗೊಳ್ಳಬೇಕು, ರಾಗಿ ಸಂಗ್ರಹಣೆಗೆ ಅಗತ್ಯವಿರುವ ಗುಣಮಟ್ಟದ 775 ಗ್ರಾಂ ತೂಕದ ಹೊಸ ಗೋಣಿಚೀಲಗಳನ್ನು ಖರೀದಿಸಿ ಕೇಂದ್ರದಲ್ಲಿ ಲಭ್ಯವಿರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿಯಾಗಿ ಖರೀದಿಕೇಂದ್ರಗಳನ್ನು ಮತ್ತು ನೊಂದಣಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದರು.

ರೈತರಿಗೆ ಅರಿವು ಮೂಡಿಸಲು ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಕರಪತ್ರ, ಭಿತ್ತಿಪತ್ರ ಹಾಗೂ ಪತ್ರಿಕಾ ಪ್ರಕಟೆಯನ್ನು ನೀಡುವ ಮೂಲಕ ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಮೂಲಕ ವ್ಯಾಪಕ ಪ್ರಚಾರವನ್ನು ಕೈಗೊಂಡು ಹೆಚ್ಚಿನ ಪ್ರಮಾಣದಲ್ಲಿ ರಾಗಿ ಸಂಗ್ರಹಿಸುವ ಕುರಿತು ಕ್ರಮವಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶಾಂತಗೌಡ, ಕೃಷಿ ಜಂಟಿ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read